ಸೋಮವಾರಪೇಟೆ, ಏ. ೨೪: ಸಮೀಪದ ಐಗೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಒಂಟಿ ಸಲಗ ಸಂಚರಿಸಿದ್ದು, ಸುತ್ತಮುತ್ತಲ ಸಾರ್ವಜನಿಕರಲ್ಲಿ ಭಯಾತಂಕ ಉಂಟು ಮಾಡಿದೆ.

ಬೆಳಿಗ್ಗೆ ೧೦.೩೦ರ ಸುಮಾರಿಗೆ ಐಗೂರು ಮುಖ್ಯರಸ್ತೆಯ ಕಾಜೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪದ ಮೀಸಲು ಅರಣ್ಯದಿಂದ ಬಂದಿರುವ ಒಂಟಿ ಸಲಗ, ಐಗೂರಿನ ಮುಖ್ಯ ರಸ್ತೆಯಲ್ಲೇ ಸಾಗಿ ಟಾಟಾ ಕಾಫಿ ಎಸ್ಟೇಟ್ ಮೂಲಕ ಕಿಬ್ರಿಬೆಟ್ಟ ಪೈಸಾರಿಗೆ ತೆರಳಿದೆ.

ವಾರಾಂತ್ಯ ಕರ್ಫ್ಯೂ ಹಿನ್ನೆಲೆ ಬೆಳಿಗ್ಗೆ ೧೦ ಗಂಟೆಯ ಮೇಲೆ ರಸ್ತೆಯಲ್ಲಿ ಜನ-ವಾಹನ ಸಂಚಾರ ಇಲ್ಲದ್ದರಿಂದ ಅಪಾಯ ತಪ್ಪಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿ ನಿರಂತರವಾಗಿದ್ದು, ಅರಣ್ಯ ಇಲಾಖೆ ಇತ್ತ ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.