ಶನಿವಾರಸಂತೆ, ಏ. ೨೪: ತಾ. ೬ ರಂದು ಪಟ್ಟಣದ ಕೆಆರ್‌ಸಿ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಮತ್ತು ದಲಿತ ಸಮುದಾಯದ ಮಹಿಳೆಯರ ಬಗ್ಗೆ ಅವಾಚ್ಯವಾಗಿ ಜಾತಿ ನಿಂದನೆ ಮಾಡಿದ ಹಾಸನ ಜಿಲ್ಲೆಯ ಕುಂಬರಳ್ಳಿಯ ಅರುಣ್ ಎಂಬವರನ್ನು ಬಂಧಿಸಬೇಕೆAದು ಸೋಮವಾರಪೇಟೆ ತಾಲೂಕು ದ.ಸಂ.ಸ. ಅಧ್ಯಕ್ಷ ಟಿ.ಇ. ಸುರೇಶ್ ಒತ್ತಾಯಿಸಿದರು. ಪಟ್ಟಣದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಬೈಲ್‌ನಲ್ಲಿ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುಂಬರಳ್ಳಿಯ ಅರುಣ್ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದರೂ ಪೊಲೀಸರು ಬಂಧಿಸಿಲ್ಲ. ಇದರಿಂದ ತಾ. ೧೭ ರಂದು ಕೊಡಗು ಮತ್ತು ಹಾಸನ ಜಿಲ್ಲಾ ದಲಿತ ಸಂಘಟನೆಗಳು ಒಟ್ಟಾಗಿ ಶನಿವಾರಸಂತೆ ಪಟ್ಟಣದಲ್ಲಿ ಪ್ರತಿಭಟನೆಯನ್ನು ನಡೆಸಿ ಈ ಕುರಿತು ಕಂದಾಯ ಇಲಾಖೆ ಆರ್‌ಐ ಅವರಿಗೆ ಆರೋಪಿಯನ್ನು ಬಂಧಿಸುವAತೆ ಮನವಿ ನೀಡಲಾಗಿತ್ತು. ಆದರೂ ಸಹ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ ಎಂದು ದೂರಿದರು. ಆರೋಪಿಯನ್ನು ಬಂಧಿಸದಿದ್ದಲ್ಲಿ ದಲಿತ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು. ಗೋಷ್ಠಿಯಲ್ಲಿ ದ.ಸಂ.ಸ. ಪ್ರಮುಖರಾದ ಡಿ.ಜೆ. ಈರಪ್ಪ, ಎಂ.ಎಸ್. ಕುಮಾರ್, ಎಸ್.ಎಲ್. ನವೀನ್, ಲೋಕೇಶ್, ವೇಧಕುಮಾರ್, ರವಿಕುಮಾರ್ ಇದ್ದರು.