ಕೊರತೆ ಇದ್ದರೆ ಗಮನಕ್ಕೆ ತನ್ನಿ: ಡಿಸಿಗಳಿಗೆ ಸಿಎಂ ಸೂಚನೆ

ಬೆಂಗಳೂರು, ಏ. ೨೪: ಯಾವುದೇ ಕ್ಷಣದಲ್ಲಿ ಆಮ್ಲಜನಕದ ಕೊರತೆಯನ್ನು ತನ್ನ ಗಮನಕ್ಕೆ ತರುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಮತ್ತು ಹಾಸಿಗೆಗಳ ದಾಸ್ತಾನು ವಿವರಗಳನ್ನು ಮುಖ್ಯಮಂತ್ರಿಗಳು ಸಂಗ್ರಹಿಸಿದರು ಮತ್ತು ಯಾವುದೇ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಅಥವಾ ಆಮ್ಲಜನಕದ ಕೊರತೆ ಇದ್ದಲ್ಲಿ ಅದನ್ನು ಗಮನಕ್ಕೆ ತರಬೇಕು ಎಂದು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಆಕ್ಸಿಜನ್ ಸರಬರಾಜು ಜಾಲದಲ್ಲಿ ವ್ಯತ್ಯಯ ಉಂಟಾಗದAತೆ ಕ್ರಮವಹಿಸಬೇಕು, ಜೊತೆಗೆ ಯಾವುದೇ ತಕ್ಷಣದ ಅಗತ್ಯತೆ ಕಂಡು ಬಂದರೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಅಥವಾ ತಮ್ಮ ಗಮನಕ್ಕೆ ಕೂಡಲೇ ತರಬೇಕು ಎಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಆಮ್ಲಜನಕ ಪೂರೈಕೆಗೆ ಅಡ್ಡಿಪಡಿಸಿದರೆ ಗಲ್ಲಿಗೇರಿಸುತ್ತೇವೆ: ದೆಹಲಿ ಹೈಕೋರ್ಟ್ ಎಚ್ಚರಿಕೆ

ನವದೆಹಲಿ, ಏ. ೨೪: ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಆಡಳಿತದ ಯಾವುದೇ ಅಧಿಕಾರಿ ಆಮ್ಲಜನಕ ಪೂರೈಕೆಗೆ ಅಡ್ಡಿ ಉಂಟುಮಾಡಿದರೆ, ಅಂತಹ ವ್ಯಕ್ತಿಯನ್ನು ಗಲ್ಲಿಗೇರಿಸುತ್ತೇವೆ ಎಂದು ದೆಹಲಿ ಹೈಕೋರ್ಟ್ ಎಚ್ಚರಿಕೆ ನೀಡಿದೆ. ದೇಶಾದ್ಯಂತ ಮಾರಕ ಕೊರೊನಾ ವೈರಸ್ ಸೋಂಕಿನ ೨ನೇ ಅಲೆಯಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದರ ನಡುವೆಯೇ ಆಕ್ಸಿಜನ್ ಇಲ್ಲದೇ ಸಾವನ್ನಪ್ಪುತ್ತಿರುವ ಸೋಂಕಿತರ ಸಂಖ್ಯೆ ಕೂಡ ಗಣನೀಯವಾಗಿ ಏರಿಕೆಯಾಗುತ್ತಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ದೇಶಾದ್ಯಂತ ಆಕ್ಸಿಜನ್ ಪೂರೈಕೆಗಾಗಿ ಕ್ರಮಕೈಗೊಂಡಿದ್ದು, ಇದರ ನಿರ್ವಹಣೆಗಾಗಿ ಸಮಿತಿಯೊಂದನ್ನೂ ಕೂಡ ರಚಿಸಿದೆ. ಈತನ್ಮಧ್ಯೆ ಆಕ್ಸಿಜನ್ ಹೊತ್ತ ಟ್ಯಾಂಕರ್‌ಗಳು ಇದೀಗ ದೇಶಾದ್ಯಂತ ಪೂರೈಕೆ ಮಾಡುತ್ತಿದ್ದು, ಕೆಲ ಟ್ಯಾಂಕರ್‌ಗಳಿಗೆ ಅಧಿಕಾರಿಗಳು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಗಂಭೀರ ಸ್ಥಿತಿಯಲ್ಲಿರುವ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಕೊರತೆ ಉಂಟಾಗಿರುವ ಬಗ್ಗೆ ದೆಹಲಿಯ ಮಹಾರಾಜ ಅಗ್ರಸೇನ್ ಆಸ್ಪತ್ರೆಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾಪಲ್ಲಿ ಅವರ ದ್ವಿಸದಸ್ಯ ಪೀಠವು, ‘ಆಮ್ಲಜನಕ ಪೂರೈಕೆಗೆ ಅಡ್ಡಿಯನ್ನುಂಟು ಮಾಡಿದ ವ್ಯಕ್ತಿಯ ಬಗ್ಗೆ ತಿಳಿಸಿ ಎಂದು ದೆಹಲಿ ಸರ್ಕಾರಕ್ಕೆ ಸೂಚಿಸಿತು. ಅಲ್ಲದೆ 'ಆಮ್ಲಜನಕ ಪೂರೈಕೆಗೆ ಅಡ್ಡಿ ಉಂಟುಮಾಡುವ ಯಾರೊಬ್ಬರನ್ನೂ ಬಿಡುವುದಿಲ್ಲ. ಅಂತಹ ಸ್ಥಳೀಯ ಅಧಿಕಾರಿಗಳ ಬಗ್ಗೆ ಕೇಂದ್ರ ಸರ್ಕಾರಕ್ಕೂ ಮಾಹಿತಿ ನೀಡಿ. ಅವರನ್ನು ಗಲ್ಲಿಗೇರಿಸುತ್ತೇವೆ. ಕೇಂದ್ರವೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದು ನ್ಯಾಯಾಲಯ ಹೇಳಿತು.

ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ

ಬೆAಗಳೂರು, ಏ. ೨೪: ರಾಜ್ಯದಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು, ಮಹಾಮಾರಿಗೆ ಶನಿವಾರ ಒಂದೇ ದಿನ ಬರೋಬ್ಬರಿ ೨೦೮ ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೧೪೨೮೩ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ೨೯,೪೩೮ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ ೧೩,೦೪,೩೯೭ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು ೧೭,೩೪೨ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ೬.೩೨,೯೨೩ಕ್ಕೆ ಏರಿಕೆಯಾಗಿದೆ. ಇನ್ನು ನಗರದಲ್ಲಿ ಸೋಂಕಿಗೆ ೧೪೯ ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಇಂದು ೯೦೫೮ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೧೦,೫೫,೬೧೨ಕ್ಕೆ ಏರಿಕೆಯಾಗಿದೆ. ಇನ್ನು ೨,೩೪,೪೮೩ ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ೧೨೮೦ ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.