ಮಡಿಕೇರಿ, ಏ. ೨೩: ‘ಪರಿಸರ ಉಳಿಸಿ ಬೆಳೆಸಿ’ ಎಂಬ ಕೂಗು ಪ್ರತಿನಿತ್ಯ ಎಲ್ಲೆಡೆ ಎಲ್ಲರ ಕಿವಿಗೂ ಕೇಳುತ್ತಿರುತ್ತದೆ. ಆದರೆ, ಸೃಷ್ಟಿಕರ್ತ ಕರುಣಿಸಿರುವ ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಟ್ಟುಬಿಡುವದು ಮನುಜರ ಸಹಜ ಗುಣವಾಗಿದೆ. ಗಿಡಗಳನ್ನು ನೆಡುವದು ಹೋಗಲಿ, ಇರುವ ಗಿಡಗಳನ್ನು ದನ-ಕುರಿಗಳನ್ನು ಬಿಟ್ಟು ತಿನ್ನಿಸುವದು, ಅಥವಾ ಮುರಿದು ನಾಶಡಿಸುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಒಂದೆರಡು ಗಿಡಗಳನ್ನು ನೆಟ್ಟು, ಕ್ಯಾಮರಾಗಳಿಗೆ ಫೋಸ್ ಕೊಟ್ಟು ಪತ್ರಿಕೆ, ಟಿವಿ, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಂಡು ಪ್ರಚಾರ ಪಡೆದುಕೊಳ್ಳುವವರೇ ಹೆಚ್ಚಾಗಿರುವ ಈ ಕಾಲದಲ್ಲಿ ಇಲ್ಲೊಬ್ಬರು ಯಾರ ಗೊಡವೆಗೂ ಹೋಗದೆ, ಯಾರಿಗೂ ತಿಳಿಯದಂತೆ ಪರಿಸರ ಸ್ವಚ್ಛಗೊಳಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮಡಿಕೇರಿಯ ಸಂತ ಜೋಸೆಫರ ಶಾಲೆಯ ಬಳಿಯಿರುವ ಮೈದಾನದ ಬಳಿ ಪರಿಸರ ದಿನಾಚರಣೆ ಅಂಗವಾಗಿ ಕೆಲವೊಂದು ಗಿಡಗಳನ್ನು ನೆಡಲಾಗಿದೆ. ಆದರೆ ಈ ಗಿಡಗಳಿಗೆ ನೀರಿನ ಸೌರ್ಯಗಳಿಲ್ಲ. ಅದರ ಬಗ್ಗೆ ಯಾರೂ ಕೂಡ ಚಿಂತನೆಯೂ ಹರಿಸಿಲ್ಲ. ಇದನ್ನು ಗಮನಿಸಿದ ಕಾನ್ವೆಂಟ್ ರಸ್ತೆಯ ಪಕ್ಕದಲ್ಲಿ ನೆಲೆಸಿರುª,À ಶಿಕ್ಷಕರಾಗಿರುವ ಚಂದ್ರಹಾಸ ಎಂಬವರು ತಾವೇ ಸ್ವತಃ ಗಿಡಗಳಿಗೆ ನೀರುಣಿಸುತ್ತಾರೆ. ಅಲ್ಲದೆ, ಸೂಕ್ತ ರಕ್ಷಣೆಯಿಲ್ಲದ ಮೈದಾನದಲ್ಲಿ ಪ್ರತಿನಿತ್ಯ ಸಂಜೆ ವೇಳೆ ಭವಿಷ್ಯದ ಪ್ರಜೆಗಳಾದ ವಿದ್ಯಾವಂತ ಯುವಕರು ಮೈದಾನದಲ್ಲಿ ಸೇರಿ ತಿಂದು, ಕುಡಿದು ಅಲ್ಲೇ ಎಸೆದು ಹೋಗುವ ಕಸ, ಬಾಟಲಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಕೈಯ್ಯಲ್ಲೊಂದು ಚೀಲ ಹಿಡಿದು ಹೆಕ್ಕಿ ಪ್ರತಿದಿನ ಬರುವ ಕಸದ ವಾಹನಕ್ಕೆ ಸುರಿಯುತ್ತಾರೆ. ಇವರ ಈ ಕೆಲಸವನ್ನು ನೋಡಿಯೂ ನೋಡದಂತಿರುವ ಯುವಪೀಳಿಗೆ ಮಾತ್ರ ತಮ್ಮ ಕಸ ಹಾಕುವ ಕಾಯಕವನ್ನು ಮಾತ್ರ ಬಿಡುತ್ತಿಲ್ಲ. ಇದ್ಯಾವದರ ಗೊಡವೆಯಿಲ್ಲದ ಈ ಶಿಕ್ಷಕರು ಮಾತ್ರ ತಮ್ಮ ನಿಸ್ವಾರ್ಥ ಸೇವೆಯನ್ನು ಮುಂದುವರಿಸಿದ್ದಾರೆ. -ಅಭಿಮಾನಿ