*ವೀರಾಜಪೇಟೆ, ಏ. ೨೩: ವೀರಾಜಪೇಟೆ ನಗರದ ಸಮೀಪವಿರುವ ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶ್ರೀ ಗಣಪತಿ, ವನದುರ್ಗಾ, ಶ್ರೀ ನಾಗ ದೇವಾಲಯದ ವಾರ್ಷಿಕ ಮಹೋತ್ಸವವು ಭಕ್ತಿ ಭಾವದಿಂದ ನೆರವೇರಿತು.

ಶಾಸ್ತೊçÃಕ್ತವಾಗಿ ವಿಧಿವಿಧಾನಗಳೊಂದಿಗೆ ಆರಂಭವಾದ ವಾರ್ಷಿಕ ಮಹೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು. ಎರಡು ದಿವಸಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ವಿಶೇಷವಾಗಿ ಚಂಡಿಕಾ ಯಾಗವು ನಡೆಯಿತು. ಜೊತೆಗೆ ನಾಗ ತಂಬಿಲ, ದುರ್ಗಾ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗಣಪತಿ ಹೋಮ-ಪೂಜೆಗಳು ನಡೆದವು.

ನಾಲ್ಕು ದೇವರುಗಳು ಇರುವ ವಿಶೇಷ ದೇಗುಲ ಇದಾಗಿದ್ದು, ಸಮೀಪದ ಹೆಗ್ಗಳ, ಬೂದಿಮಾಳ, ಆರ್ಜಿ, ಪೆರಂಬಾಡಿ ಹಾಗೂ ವೀರಾಜಪೇಟೆಯ ಭಕ್ತಾದಿಗಳು ಆಗಮಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕ ಬಿ.ಎಸ್. ವೇಣುಗೋಪಾಲ್ ಹಾಗೂ ವಿಶ್ವನಾಥ ಭಟ್ಟರ ನೇತೃತ್ವದ ಆರು ಮಂದಿ ಪುರೋಹಿತರು ಪೂಜಾ ಕಾರ್ಯವನ್ನು ನೆರವೇರಿಸಿದರು. ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನದಾನ ಮಾಡಲಾಯಿತು.