ಶನಿವಾರಸಂತೆ, ಏ. ೨೩: ಕ.ರ.ವೇ. ತಾಲೂಕು ಘಟಕದ ಸಮಾಜಮುಖಿ ಕಾರ್ಯಗಳನ್ನು ಫೇಸ್‌ಬುಕ್‌ನಲ್ಲಿ ಗಮನಿಸಿದ ಹ್ಯಾಬಿಟೇಟ್ ಫಾರ್ ಹ್ಯೂಮಾನಿಟಿ ಇಂಡಿಯಾ ಸಂಸ್ಥೆ ಕ.ರ.ವೇ. ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಅವರನ್ನು ಸಂಪರ್ಕಿಸಿ, ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂರಿಲ್ಲದ ಬಡವರ್ಗದ ಫಲಾನುಭವಿಗಳಿಗೆ ನೂತನ ಮನೆ ನಿರ್ಮಾಣ ಹಾಗೂ ಬಿದ್ದು ಹೋಗಿರುವ ಮನೆಗಳ ದುರಸ್ತಿ ಕಾರ್ಯಕ್ಕೆ ಮುಂದಾಗಿದೆ.
ಕ.ರ.ವೇ. ಕಾರ್ಯಕರ್ತರು ಗ್ರಾಮ ಗ್ರಾಮಗಳನ್ನು ಸುತ್ತಿ ಹಳೇ ಮನೆಗಳು, ಬಿದ್ದು ಹೋಗಿರುವ ಮನೆಗಳು ಹಾಗೂ ಮನೆಯೇ ಇಲ್ಲದವರ ಪಟ್ಟಿಯನ್ನು ಬೆಂಗಳೂರಿನ ಮಾನವ ಹಕ್ಕುಗಳ ಟ್ರಸ್ಟ್ ಸಂಸ್ಥೆಗೆ ರವಾನಿಸಿದ್ದರು. ಟ್ರಸ್ಟ್ ತಂಡದ ಸದಸ್ಯರು ಪಂಚಾಯಿತಿ ವ್ಯಾಪ್ತಿಯಲ್ಲಿ ದಾನಿಗಳ ಸಹಕಾರದಿಂದ ಮನೆಗಳ ವೀಕ್ಷಣೆ ಮಾಡಿ, ಪರಿಶೀಲಿಸಿ ೪೦ ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದರು.
ಮೊದಲ ಹಂತದಲ್ಲಿ ೪ ನೂತನ ಮನೆಗಳ ನಿರ್ಮಾಣ, ೮ ಮನೆಗಳ ದುರಸ್ತಿ ಕಾಮಗಾರಿಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅನುಮತಿ ನೀಡಿ ನಿರ್ಣಯ ಮಾಡಲಾಗಿದೆ. ಇನ್ನೊಂದೆರೆಡು ದಿನಗಳಲ್ಲಿ ಮಾನವ ಹಕ್ಕುಗಳ ಟ್ರಸ್ಟ್ ಸಂಸ್ಥೆ ತಂಡದ ವತಿಯಿಂದ ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದು ಕ.ರ.ವೇ. ತಾಲೂಕು ಘಟಕದ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹಾಗೂ ಕಾರ್ಯಕರ್ತರು ತಿಳಿಸಿದ್ದಾರೆ.