ಆಮ್ಲಜನಕ ಮತ್ತು ರೆಮ್‌ಡಿಸಿವರ್
ಹೆಚ್ಚುವರಿ ಪೂರೈಕೆ: ಪ್ರಧಾನಿ ಭರವಸೆ
ಬೆಂಗಳೂರು, ಏ. ೨೩: ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್‌ಡಿಸಿವಿರ್ ಹೆಚ್ಚುವರಿ ಉತ್ಪಾದನೆ ಹಾಗೂ ಪೂರೈಕೆಗೆ ಕೇಂದ್ರ ಸರ್ಕಾರ ಸಿದ್ಧವಿದ್ದು, ರಾಜ್ಯ ಸರ್ಕಾರಗಳೂ ಪರಸ್ಪರ ಸಹಕರಿಸುವ ಮೂಲಕ ಸವಾಲನ್ನು ಸಮರ್ಥವಾಗಿ ಎದುರಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದರು. ಅವರು ಇಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊAದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್ನಲ್ಲಿ ಈ ವಿಷಯ ತಿಳಿಸಿದರು. ಈಗ ಎದುರಾಗಿರುವ ವಿಪತ್ತನ್ನು ಎದುರಿಸಲು ಆರೋಗ್ಯ ಸೇವಾ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದು, ಮುನ್ನೆಚ್ಚರಿಕೆಯ ಕ್ರಮಗಳ ಕಟ್ಟುನಿಟ್ಟಿನ ಪಾಲನೆ, ಅನಗತ್ಯ ಆಸ್ಪತ್ರೆಗೆ ದಾಖಲಾಗುವುದನ್ನು ತಪ್ಪಿಸುವುದು ಹಾಗೂ ಆಮ್ಲಜನಕದ ಸಮರ್ಪಕ ಹಾಗೂ ಮಿತಬಳಕೆಗೆ ಆದ್ಯತೆ ನೀಡುವುದು ಹಾಗೂ ಜನರಲ್ಲಿ ವಿಶ್ವಾಸ ಮೂಡಿಸುವುದು ಅತಿ ಅಗತ್ಯ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು. ಆಮ್ಲಜನಕದ ದುರ್ಬಳಕೆಯಾಗದಂತೆ ಎಲ್ಲ ರಾಜ್ಯಗಳಲ್ಲೂ ಆಕ್ಸಿಜನ್ ಆಡಿಟ್ ಮಾಡಿಸುವಂತೆ ಪ್ರಧಾನ ಮಂತ್ರಿಯವರು ಸಲಹೆ ನೀಡಿದರು. ಜೊತೆಗೆ ಆಮ್ಲಜನಕದ ಟ್ಯಾಂಕರುಗಳ ಸುಗಮ ಸಂಚಾರಕ್ಕೆ ರಾಜ್ಯ ಸರ್ಕಾರಗಳು ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಆಮ್ಲಜನಕ ಮತ್ತು ರೆಮ್‌ಡಿಸಿವಿರ್ ಸದ್ಬಳಕೆಯಾಗುವ ನಿಟ್ಟಿನಲ್ಲಿ ಆತಂಕದ ಕೊಳ್ಳುವಿಕೆಯನ್ನು ನಿಯಂತ್ರಿಸುವAತೆ ಅವರು ಸಲಹೆ ಮಾಡಿದರು. ಹೆಚ್ಚುತ್ತಿರುವ ಪ್ರಕರಗಳಿಂದಾಗ ಮಾನವ ಸಂಪನ್ಮೂಲ ಅಗತ್ಯತೆಯೂ ಹೆಚ್ಚುತ್ತಿದ್ದು, ಇತ್ತೀಚೆಗೆ ನಿವೃತ್ತರಾದ ಸಿಬ್ಬಂದಿಯ ಸೇವೆ ಬಳಕೆ ಮಾಡಿಕೊಳ್ಳಿ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೀಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿ, ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಕೈಗೊಳ್ಳುತ್ತಿರುವ ಕ್ರಮಗಳು ಹಾಗೂ ರಾಜ್ಯದ ವಸ್ತುಸ್ಥಿತಿಯನ್ನು ವಿವರಿಸಿದರು. ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯಕ್ಕೆ ದಿನಕ್ಕೆ ೧೪೭೧ ಟನ್ ಆಮ್ಲಜನಕ ಹಂಚಿಕೆ ಮಾಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
ಕೋವಿಡ್ ಲಸಿಕೆ ಕೈಗೆಟುಕುವಂತೆ ಮಾಡಲು ಒತ್ತಾಯ
ನವದೆಹಲಿ, ಏ. ೨೩: ಕೋವಿಡ್-೧೯ ಲಸಿಕೆ ಮುಕ್ತ ಮಾರುಕಟ್ಟೆಯಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಜನೌಷಧಿ ಯೋಜನೆಯ ಮೂಲಕ ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶುಕ್ರವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಕೊರೊನಾ ಲಸಿಕೆ ೧೮ ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತವಾಗಿ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಐಎಂಎ ಮನವಿ ಮಾಡಿದೆ. ಸಾಂಕ್ರಾಮಿಕ ರೋಗ ನಿಯಂತ್ರಿಸಲು ಆದ ಆರ್ಥಿಕ ವೆಚ್ಚಕ್ಕಿಂತ ೧೮ ವರ್ಷಕ್ಕಿಂತ ಮೇಲ್ಪಟ್ಟವರಿಗೆ ಸಾಮೂಹಿಕವಾಗಿ ಉಚಿತ ಲಸಿಕೆ ನೀಡುವ ವೆಚ್ಚವು ಕಡಿಮೆ ಇರುತ್ತದೆ ಎಂದು ಐಎಂಎ ಪ್ರಕಟಣೆಯಲ್ಲಿ ತಿಳಿಸಿದೆ. ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಹಾಕುವುದು ಸರ್ಕಾರದ ಆದ್ಯತೆಯಾಗಿರಬೇಕು, ವ್ಯಾಕ್ಸಿನೇಷನ್ ವೈಯಕ್ತಿಕ ಸುರಕ್ಷತೆಯನ್ನು ಮಾತ್ರವಲ್ಲದೆ ಇಡೀ ಸಮುದಾಯದ ಸುರಕ್ಷತೆಗೆ ದಾರಿ ಮಾಡಿಕೊಡುವ ಮೂಲಕ ಸಮಾಜದ ಸುರಕ್ಷತೆಯನ್ನೂ ಹೆಚ್ಚಿಸುತ್ತದೆ ಎಂದು ವೈದ್ಯರ ಸಂಘ ಹೇಳಿದೆ. ಅಲ್ಲದೆ ಲಸಿಕೆ ದರದಲ್ಲಿ ಪಾರದರ್ಶಕತೆ ಇರಬೇಕು ಎಂದು ಸಂಘ ಒತ್ತಾಯಿಸಿದೆ.
ಕೊರೊನಾ ವೈರಸ್ ದೇಹಕ್ಕೆ ಸುಳಿಯದಂತೆ ಯೋಗ, ಪ್ರಾಣಾಯಾಮ ಮಾಡಲು ಸಲಹೆ
ಬೆಂಗಳೂರು, ಏ. ೨೩: ಕೊರೊನಾದಂತಹ ದೊಡ್ಡ ಸಾಂಕ್ರಾಮಿಕ ರೋಗ ಬಂದಾಗ ಎಂತಹ ವ್ಯವಸ್ಥೆಗಳಿದ್ದರೂ ಕೆಲವೊಮ್ಮೆ ವಿಫಲವಾಗುತ್ತದೆ, ಕೈಕೊಡುತ್ತದೆ, ನಮ್ಮ ಕೈಲಾದಷ್ಟು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಪ್ರಯತ್ನಿಸುತ್ತಿದ್ದೇವೆ, ಅಮೇರಿಕಾ, ಇಂಗ್ಲೆAಡ್, ಫ್ರಾನ್ಸ್ ನಂತಹ ಮುಂದುವರಿದ ದೇಶಗಳಲ್ಲೇ ಸಮಸ್ಯೆಗಳು ತಲೆದೋರುತ್ತಿವೆ. ಅಂತಹುದರಲ್ಲಿ ಕರ್ನಾಟಕ ಸೇರಿದಂತೆ ಭಾರತದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಆರೋಗ್ಯ ಸೇವೆ ಉತ್ತಮವಾಗಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿAದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಸಚಿವರು, ಆಡಳಿತ ಸಿಬ್ಬಂದಿ ಕೈಮೀರಿ ಕೆಲಸ ಮಾಡುತ್ತಿದ್ದಾರೆ, ಸರ್ಕಾರ ಜನರ ಪರವಾಗಿದೆ, ಜನರು ವಿಶ್ವಾಸವಿಟ್ಟು ಆರೋಗ್ಯವಾಗಿರಿ, ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಳ್ಳಬೇಡಿ, ಆತಂಕಕ್ಕೊಳಬೇಡಿ, ಅದರಿಂದ ಖಾಯಿಲೆ ಹೆಚ್ಚಾಗುತ್ತದೆ ಎಂದರು. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ದಿನನಿತ್ಯ ಬೆಳಿಗ್ಗೆ ಎದ್ದು ಎಲ್ಲರೂ ಪ್ರಾಣಾಯಾಮ ಮಾಡಿ, ಶ್ವಾಸಕೋಶ ಉತ್ತಮವಾಗಿ ಕೆಲಸ ಮಾಡಲು ಉತ್ತಮ ವಾತಾವರಣದಲ್ಲಿ ಕುಳಿತು ಪ್ರಾಣಾಯಾಮ, ಲಘು ವ್ಯಾಯಾಮ ಅಭ್ಯಾಸ ಮಾಡಿ, ರೋಗನಿರೋಧಕ ಶಕ್ತಿ ನಮ್ಮ ದೇಹದಲ್ಲಿ ಹೆಚ್ಚಾದಾಗ ಯಾವ ರೋಗಾಣು ನಮ್ಮ ದೇಹಕ್ಕೆ ಸೋಂಕಲು ಸಾಧ್ಯವಿಲ್ಲ ಎಂದು ಮೂಲತಃ ವೈದ್ಯರಾಗಿರುವ ಡಾ. ಸುಧಾಕರ್ ಜನತೆಗೆ ಸಲಹೆ ನೀಡಿದ್ದಾರೆ. ೧೪ ದಿನಗಳು ಕೊರೊನಾ ಚೈನ್‌ನ್ನು ಮುರಿಯಲು ಕಡ್ಡಾಯವಾಗಿ ಬೇಕಾಗುವಂತಹ ದಿನಗಳು, ಅದಕ್ಕಾಗಿ ಸರ್ಕಾರ ಕಟ್ಟುನಿಟ್ಟಿನ ಕ್ರಮಗಳನ್ನು ಕ್ರಮಗಳನ್ನು ತೆಗೆದುಕೊಂಡಿದೆ, ಕೆಲವರು ಈ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಯಾರ ಟೀಕೆ, ಆಪಾದನೆಗಳಿಗೆ ಉತ್ತರ ಕೊಡುವುದಿಲ್ಲ, ಕೆಲವು ದೇಶಗಳಲ್ಲಿ ೨, ೩ ಮತ್ತು ನಾಲ್ಕನೇ ಅಲೆ ಕೂಡ ಬಂದಿದೆ. ಅಂತಹ ದೇಶಗಳಲ್ಲಿ ಎಲ್ಲಾ ಸಂದರ್ಭಗಳಲ್ಲಿ ಒಂದು-ಒAದೂವರೆ ತಿಂಗಳು ಲಾಕ್‌ಡೌನ್ ಮಾಡಿದ್ದಾರೆ, ನಾವು ಆ ಪರಿಸ್ಥಿತಿಗೆ ತಂದಿಲ್ಲ. ಜನಜೀವನ, ಚಟುವಟಿಕೆಗಳಿಗೆ ಅವಕಾಶ ನೀಡಿದ್ದೇವೆ. ಎಲ್ಲಾ ಚಟುವಟಿಕೆಗಳನ್ನು ಮಾಡಿಕೊಂಡು ನಿಯಂತ್ರಣ ಮಾಡಿ ಎಂದರೆ ಹೇಗೆ ಸಾಧ್ಯ ಎಂದು ಟೀಕಾಕಾರರನ್ನು ಡಾ. ಸುಧಾಕರ್ ಪ್ರಶ್ನಿಸಿದರು. ಜನತೆಗೆ ತಪ್ಪು ಸಂದೇಶ ತಲುಪಿಸುವುದು, ಇಂದಿನ ಆರೋಗ್ಯ ಹೋರಾಟದಲ್ಲಿ ರಾಜಕೀಯ ಮಾಡುವುದು, ಪರಸ್ಪರ ಆಪಾದನೆ ಮಾಡುವುದು ದಯವಿಟ್ಟು ಮಾಡಬೇಡಿ, ಅದಕ್ಕೆ ಇದು ಸಮಯವಲ್ಲ, ಇದು ಸಾಮೂಹಿಕವಾಗಿ ಹೋರಾಟ ಮಾಡಬೇಕಾದ ಸಮಯ, ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಣೆಯ ಸಮಯವಿದು, ಈ ರೂಪಾಂತರ ವೈರಾಣು ಸಂಪೂರ್ಣ ಹೊಸದು, ವೈಜ್ಞಾನಿಕ ನೆಲೆಗಟ್ಟಿನ ಕ್ರಮಗಳನ್ನು ಪ್ರಾಯೋಗಿಕವಾಗಿ ತೆಗೆದುಕೊಳ್ಳುತ್ತಿದ್ದೇವೆ, ವೈದ್ಯಕೀಯ ಜಗತ್ತಿಗೇ ಸವಾಲು, ಜನರು ಭಯದಲ್ಲಿದ್ದಾರೆ, ಇಂತಹ ಸಂದರ್ಭದಲ್ಲಿ ನೈತಿಕವಾಗಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ
ಬೆAಗಳೂರು, ಏ. ೨೩: ದೈನಂದಿನ ಕೃಷಿ ಚಟುವಟಿಕೆಗಳಿಗೆ, ಕೃಷಿ ಇಲಾಖೆಗೆ ರಾತ್ರಿ ಕರ್ಫ್ಯೂ, ವೀಕೆಂಡ್ ಕರ್ಪ್ಯೂ, ಜನತಾ ಕರ್ಪ್ಯೂ ಅನ್ವಯಿಸುವುದಿಲ್ಲ. ಯಾವುದೇ ಇಲಾಖೆಯ ಯಾವುದೇ ಅಧಿಕಾರಿಗಳು ರೈತರ ದೈನಂದಿನ ಕೃಷಿ ಚಟುವಟಿಕೆಗಳಿಗೆ ತಡೆಯನ್ನಾಗಲಿ, ತೊಂದರೆ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ವಿಕಾಸಸೌಧದ ಕಚೇರಿಯಲ್ಲಿ ಮಾತನಾಡಿದ ಕೃಷಿ ಸಚಿವರು ಹೂವು, ಹಣ್ಣು, ದವಸ ಧಾನ್ಯ ಮಾರುಕಟ್ಟೆಗೆ ಸಾಗಿಸಲು ಆರ್.ಟಿ.ಓ. ಸೇರಿದಂತೆ ಯಾರೂ ತೊಂದರೆ ಮಾಡಬಾರದು. ಬಿತ್ತನೆ ಕಾರ್ಯಕ್ಕಾಗಿ ಪೊಲೀಸ್ ಆಗಲೀ ಯಾವುದೇ ಇಲಾಖೆಯಾಗಲಿ ತೊಂದರೆ ಮಾಡಬಾರದು. ಮುಂಗಾರು ಈಗಾಗಲೇ ಪ್ರಾರಂಭವಾಗಿದ್ದು, ರಸಗೊಬ್ಬರ ಅಂಗಡಿಗಳಿಗಾಗಲೀ, ರೈತ ಸಂಪರ್ಕ ಕೇಂದ್ರಗಳಿಗಾಗಲೀ, ಬಿತ್ತನೆ ಕಾರ್ಯಕ್ಕಾಗಲೀ ಯಾರೂ ಸಹ ತೊಂದರೆಯನ್ನುAಟುಮಾಡಬಾರದು. ಕೆಲವು ಕಡೆ ಕೃಷಿ ಪರಿಕರಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿರುವುದು ತಿಳಿದುಬಂದಿರುತ್ತದೆ. ಹೀಗೆ ಮಾಡಿರುವುದು ತಪ್ಪು. ಎಲ್ಲಾ ಇಲಾಖೆಗಳು ಎಲ್ಲಾ ಇಲಾಖಾಧಿಕಾರಿಗಳು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸಹಕಾರ ನೀಡಬೇಕು. ಕೃಷಿ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧ ಹೇರಬಾರದು. ಕೊರೊನಾ ಸುರಕ್ಷತೆ ಸಾಮಾಜಿಕ ಅಂತರದ ಜೊತೆಗೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.