ಕಣಿವೆ, ಏ. ೨೩: ಮೋಸ ಹೋಗುವವರು ಇರೋತನಕ ಮೋಸ ಮಾಡುವವರು ಇದ್ದೇ ಇರುತ್ತಾರೆ. ನಿಮ್ಮ ಬಳಿ ಇರೋ ಚಿನ್ನ ಹಾಗೂ ಹಣವನ್ನು ಡಬಲ್ ಮಾಡಿಕೊಡ್ತೇನೆ ಅಂತಾ ಹೇಳಿ ಕುಶಾಲನಗರದ ಬೈಚನಹಳ್ಳಿಯ ಮಹಿಳೆಯೊಬ್ಬರನ್ನು ವಂಚಿಸಿ ಸುಮಾರು ೩೦೦ ಗ್ರಾಂ ಚಿನ್ನಾಭರಣ ಹಾಗೂ ೩೧ ಸಾವಿರ ಹಣದೊಂದಿಗೆ ಪರಾರಿಯಾದ ಗಿರಾಕಿಗಳು ಇದೀಗ ಪೊಲೀಸ್ ಅತಿಥಿಗಳಾಗಿ ಮಡಿಕೇರಿ ಜೈಲಿನಲ್ಲಿ ಇರೋ ವಿಚಾರ ಮಾಸುವ ಮುನ್ನವೇ ಇಂತಹದೇ ಮಾದರಿಯ ಇನ್ನೊಂದು ವಂಚನೆ ಪ್ರಕರಣ ಗುಡ್ಡೆಹೊಸೂರು ಸಮೀಪದ ಬಸವನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಚಿನ್ನಾಭರಣಗಳನ್ನು ತೊಳೆದುಕೊಡುವ ನೆಪದಲ್ಲಿ ಬಸವನಹಳ್ಳಿಯ ಮನೆಯೊಂದಕ್ಕೆ ಧಾವಿಸಿದ ಇಬ್ಬರು ಪುರುಷರು ಗೃಹಿಣಿ ಜ್ಯೋತಿ ಎಂಬವರ ಬಳಿ ೧೫ ಗ್ರಾಂ ತೂಕದ ಚಿನ್ನದ ಚೈನ್ ಒಂದನ್ನು ಪಡೆದು ಅದನ್ನು ಹೊಳೆಯುವಂತೆ ಮಾಡಿ ಕೊಡುವುದಾಗಿ ನಂಬಿಸಿ ೧೨ ಗ್ರಾಂ ನಷ್ಟು ಚಿನ್ನವನ್ನು ಕದ್ದು ವಂಚಿಸಲಾಗಿದೆ. ಈ ಗೃಹಿಣಿ ಜ್ಯೋತಿ ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
(ಮೊದಲ ಪುಟದಿಂದ) ಈ ಸಂಬAಧ ಬಿಹಾರ ಮೂಲದ ಮಿಥುನ್ ಕುಮಾರ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಚಿನ್ನವನ್ನು ಹೊತ್ತೊಯ್ದ ಪ್ರಮುಖ ಆರೋಪಿ ನಾಪತ್ತೆಯಾಗಿದ್ದು ಆತನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಇAತಹ ಪ್ರಕರಣಗಳ ವಿಚಾರವಾಗಿ ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಎಚ್ಚರಿಕೆ ವಹಿಸುವಂತೆ ಕೋರಿರುವ ಗ್ರಾಮಾಂತರ ಠಾಣಾಧಿಕಾರಿ ಶಿವಶಂಕರ್, ಮಾಟ ಮಂತ್ರ ಮಾಡಿಸಿ ಹಣ ಹಾಗೂ ಚಿನ್ನ ದುಪ್ಪಟ್ಟು ಮಾಡುತ್ತೇನೆ ಎಂದು ಬರುವ ಹಾಗೂ ಚಿನ್ನಾಭರಣಗಳನ್ನು ಪಾಲಿಶ್ ಮಾಡುವುದಾಗಿ ಹೇಳಿ ಬರುವವರ ವಿರುದ್ಧ ಕಟ್ಟೆಚ್ಚರ ವಹಿಸಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕೆಂದು ಅವರು ಕೋರಿದ್ದಾರೆ.