ನಾಪೋಕ್ಲು, ಏ. ೨೨: ನಾಪೋಕ್ಲು ಪ್ರೌಢಶಾಲೆಯ ಜಾಗದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಅಂಬೇಡ್ಕರ್ ವಸತಿ ಶಾಲೆಯ ಜಾಗ ದಲ್ಲಿರುವ ಮರಗಳನ್ನು ಕಡಿಯುವ ಸಲುವಾಗಿ ಅರಣ್ಯ ಇಲಾಖೆಯವರು ಮಡಿಕೇರಿಯ ಅರಣ್ಯ ಭವನದಲ್ಲಿ ತಾ. ೨೩ ರಂದು (ಇಂದು) ಸಭೆ ಏರ್ಪಡಿಸಿದ್ದು, ಈ ಸಭೆಯನ್ನು ಕೂಡಲೇ ರದ್ದುಗೊಳಿಸಿ ನಾಪೋಕ್ಲು ವಿನಲ್ಲಿ ನಡೆಸುವಂತೆ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಆಗ್ರಹಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪೋಕ್ಲು ವಿನಲ್ಲಿ ಕಳೆದ ೯೮ ವರ್ಷಗಳ ಹಿಂದೆ ಇಲ್ಲಿನ ಬೇತು ಗ್ರಾಮದ ಚೋಕಿರ, ಕೀಕಂಡ, ಬೊಳ್ಳೇಪಂಡ, ಕಾಳೇಯಂಡ, ಪೊರವಡ, ಮಕ್ಕಿ ಬ್ರಾಹ್ಮಣರ ಕುಟುಂಬದವರು ಈ ವಿಭಾಗದ ಜನರು ವಿದ್ಯಾವಂತರಾಗಲಿ ಎಂಬ ಉದ್ದೇಶದಿಂದ ಶಾಲೆಯನ್ನು ನಿರ್ಮಿಸಲು ಸುಮಾರು ೫೬ ಎಕರೆ ಜಾಗವನ್ನು ಉದಾರವಾಗಿ ನೀಡಿದ್ದು, ಇಂದು ಈ ಜಾಗಲ್ಲಿ ಪ್ರೌಢಶಾಲೆ, ಜೂನಿಯರ್ ಕಾಲೇಜು ಮತ್ತು ಪದವಿ ಕಾಲೇಜು ನಿರ್ಮಾಣಗೊಂಡು ಲಕ್ಷಾಂತರ ಜನರು ಇದರಿಂದ ವಿದ್ಯಾವಂತರಾಗಿದ್ದಾರೆ.
ಇಲ್ಲಿ ಸುಮಾರು ರೂ. ೨೫ ಕೋಟಿ ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆಯನ್ನು ನಿರ್ಮಾಣ ಮಾಡಲು ಈ ಜಾಗದಲ್ಲಿರುವ ಬೆಲೆ ಬಾಳುವ ಬೀಟೆ ಮತ್ತಿತರ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಮಡಿಕೇರಿಯಲ್ಲಿ ಸಭೆಯನ್ನು ಕರೆದಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದು ಮನು ಮುತ್ತಪ್ಪ ಆರೋಪಿಸಿದರು ನಾಪೋಕ್ಲುವಿನಲ್ಲಿ ಸಭೆಯನ್ನು ನಡೆಸಲು ಅವರಿಗೆ ಸ್ಥಳದ ಕೊರತೆ ಇದೆಯೇ ಎಂದು ಪ್ರಶ್ನಿಸಿದ ಅವರು ಇದರಲ್ಲಿ ಟಿಂಬರ್ ಲಾಬಿ ಇದೆಯೇ ಎಂದು ಆರೋಪಿಸಿದ್ದಾರೆ.
ಈಗಾಗಲೇ ದಾನ ನೀಡಿದ ಜಾಗದಲ್ಲಿ ಒತ್ತುವರಿಯಾಗಿದ್ದು, ಈ ಬಗ್ಗೆ ಯಾವುದೇ ಸರಕಾರ ತಲೆಕೆಡಿಸಿಕೊಂಡಿಲ್ಲ ಎಂದ ಅವರು; ಕಾಲೇಜಿನಲ್ಲಿ ಈ ಹಿಂದೆ ರಾತೋರಾತ್ರಿ ಮರ ಹನನವಾಗಿದ್ದು, ಇದರಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಸದಸ್ಯರ ಕೈವಾಡ ಇದ್ದು ಇವರಿಗೆ ಮರ ಕಡಿದು ಮಾರಾಟ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದರು. ಶಾಲೆಗೆ ಸೇರಿದ ಜನರಲ್ ತಿಮ್ಮಯ್ಯ ಕ್ರೀಡಾಂಗಣದ ದುರಸ್ತಿಗಾಗಿ ರೂ. ೨.೫೦ ಲಕ್ಷ ಹಣ ಮಂಜೂರಾ ಗಿದ್ದು, ಇದರಲ್ಲಿ ಕೇವಲ ತಡೆಗೋಡೆ, ಸುಣ್ಣ ಬಳಿಯಲಾಗಿದೆ ಹೊರತು ಬೇರೆ ಯಾವುದೇ ದುರಸ್ತಿ ನಡೆಯದೇ ಹಣ ದುರುಪಯೋಗವಾಗಿದೆ. ಇದರ ಬಗ್ಗೆ ತನಿಖೆಯಾಗಬೇಕು. ಕಾಲೇಜಿನಲ್ಲಿ ಅಭಿವೃದ್ಧಿ ಕೆಲಸಕ್ಕೆ ಹಣ ಮಂಜೂರು ಆದರೂ ಯಾರ ಗಮನಕ್ಕೆ ತರದೇ ಏಕಪಕ್ಷೀಯವಾಗಿ ಈ ಜನಪ್ರತಿನಿಧಿ ನಿರ್ಧಾರ ಕೈಗೊಳ್ಳುತ್ತಿರುವ ವಿಷಯ ಎಲ್ಲರಿಗೂ ತಿಳಿದಿದೆ ಎಂದ ಅವರು; ಇವರ ಕಿರುಕುಳದಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಂಶುಪಾಲೆ ಯೊಬ್ಬರು ಸ್ವಯಂ ನಿವೃತ್ತಿ ಕೈಗೊಂಡಿ ದ್ದಾರೆ. ಇದಕ್ಕೆಲ್ಲ ಈ ಜನಪ್ರತಿನಿಧಿಯೇ ಕಾರಣ ಎಂದು ಆರೋಪಿಸಿದರು.
ಹಳೆ ವಿದ್ಯಾರ್ಥಿ ಬಿದ್ದಾಟಂಡ ಜಿನ್ನು ನಾಣಯ್ಯ ಮಾತನಾಡಿ, ಕಾಲೇಜಿನ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಜಿಲ್ಲಾ ಪಂಚಾಯಿತಿ ಸದಸ್ಯರ ವರ್ತನೆ ಸರಿಯಲ್ಲ ಎಂದ ಅವರು; ಇದರ ಬಗ್ಗೆ ಸೂಕ್ತ ತನಿಖೆಯಾಗಬೇಕು, ಇಲ್ಲದಿದ್ದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಮಾಜಿ ಸೈನಿಕ ಸಂಘದ ಉಪಾಧ್ಯಕ್ಷ ಕೊಂಡೀರ ನಾಣಯ್ಯ ಮಾತನಾಡಿ, ಕಾಲೇಜಿನ ಅಭಿವೃದ್ಧಿ ಹಣ ದುರುಪಯೋಗವಾಗಿದ್ದು ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೊಡವ ಸಮಾಜದ ಖಜಾಂಚಿ ಅಪ್ಪಾರಂಡ ಸುದೀರ್ ಅಯ್ಯಪ್ಪ, ಸಹ ಕಾರ್ಯದರ್ಶಿ ಮಾಚೇಟಿರ ಕುಶು ಕುಶಾಲಪ್ಪ, ನಿರ್ದೇಶಕ ಕಾಟುಮಣಿಯಂಡ ಉಮೇಶ್, ಗ್ರಾಮ ಪಂಚಾಯಿತಿ ಸದಸ್ಯ ಕಾಳೇಯಂಡ ಸಾಬ ತಿಮ್ಮಯ್ಯ, ಗ್ರಾಹಕರ ಸಂಘದ ಅಧ್ಯಕ್ಷ ಪಟ್ರಪಂಡ ಮೋಹನ್ ಮುದ್ದಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕೊಡವ ಸಮಾಜದ ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್, ನಿಡುಮಂಡ ಕೃತಿ. ಅರೆಯಡ ನಂದ, ಬೊಳ್ಳೇಪಂಡ ಪೂಣಚ್ಚ, ಚೋಕಿರ ಪ್ರಭು ಪೂವಪ್ಪ, ಇದ್ದರು. -ದುಗ್ಗಳ