ಗೋಣಿಕೊಪ್ಪಲು, ಏ. ೨೨: ನಿರಂತರ ಹೋರಾಟದ ಫಲವಾಗಿ ಸರ್ಕಾರ ಜಾನುವಾರುಗಳ ಪ್ರಾಣ ಹಾನಿ ಸಂಭವಿಸಿದ ಸಂದರ್ಭ ನೀಡುವ ಪರಿಹಾರವನ್ನು ಹೆಚ್ಚಳ ಮಾಡಿರುವುದನ್ನು ರೈತ ಸಂಘ ಶ್ಲಾಘಿಸುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ, ಕೊಡಗು ಜಿಲ್ಲಾ ಉಸ್ತುವಾರಿ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹೇಳಿದರು.
ರೈತ ಸಂಘದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ನಿರಂತರ ಕಾಡು ಪ್ರಾಣಿಗಳಿಂದ ರೈತರ ಜಾನುವಾರುಗಳು ಮೃತಪಟ್ಟ ಸಂದರ್ಭ ಈ ಹಿಂದೆ ನೀಡುತ್ತಿದ್ದ ಪರಿಹಾರ ಏನೇನೂ ಸಾಲದು ಎಂದು ಸರ್ಕಾರವನ್ನು ಒತ್ತಾಯಿಸುತ್ತಲೆ ಬರಲಾಗಿತ್ತು. ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಡಿಎಫ್‌ಒ ಮರಿಯಾ ಕೃಸ್ತರಾಜ್, ಸಿಸಿಎಫ್ ಹೀರಾಲಾಲ್, ರೈತ ಸಂಘ ನೀಡಿದ ಮನವಿಯನ್ನು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಅಲ್ಲದೆ ಜಿಲ್ಲೆಗೆ ಆಗಮಿಸಿದ್ದ ಪಿಸಿಸಿಎಫ್ ವಿಜಯ್ ಕುಮಾರ್ ಗೋಗಿ ಅವರಿಗೂ ಮನವಿ ಮಾಡಲಾಗಿತ್ತು.
ರೈತ ಸಂಘ ನೀಡಿದ ಮನವಿಯನ್ನು ಆಧರಿಸಿ ಇಲ್ಲಿಯ ಜನಪ್ರತಿನಿಧಿಗಳ, ಅಧಿಕಾರಿಗಳ ಶಿಫಾರಸ್ಸುಗಳನ್ನು ಒಟ್ಟಾಗಿಸಿ ನ್ಯಾಯ ಕೊಡಿಸುವಲ್ಲಿ ಹಿರಿಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದು ರೈತರು ಮಾಡಿದ ನಿರಂತರ ಹೋರಾಟಕ್ಕೆ ಸಿಕ್ಕ ಫಲ ಎಂದು ಹೇಳಿದರು.
ಮಾನವ ವನ್ಯಜೀವಿ ಸಂಘರ್ಷದಿAದ ಹಸು, ಎಮ್ಮೆ, ಕೋಣ ಮೃತಪಟ್ಟಲ್ಲಿ ಅವುಗಳ ಮಾಲೀಕರಿಗೆ ಈಗ ನೀಡಲಾಗುತ್ತಿರುವ ಪರಿಹಾರ ಹಣವನ್ನು ೧೦ ಸಾವಿರದಿಂದ ೭೫ ಸಾವಿರ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ರೈತ ಸಂಘದ ಬಹು ದಿನಗಳ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಆದರೆ ಕೇವಲ ಪರಿಹಾರ ಹಣವನ್ನು ಹೆಚ್ಚಿಸುವ ಮೂಲಕ ಸರ್ಕಾರ ಸುಮ್ಮನಾಗಬಾರದು. ಜಿಲ್ಲೆಯಲ್ಲಿ ವನ್ಯ ಜೀವಿಗಳ ಉಪಟಳವನ್ನು ಶಾಶ್ವತವಾಗಿ ತಹಬದಿಗೆ ತರಲು ಅರಣ್ಯ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಆಲೆಮಾಡ ಮಂಜುನಾಥ್, ಅಮ್ಮತ್ತಿ ಹೋಬಳಿ ಅಧ್ಯಕ್ಷ ಮಂಡೇಪAಡ ಪ್ರವೀಣ್ ಉಪಸ್ಥಿತರಿದ್ದರು.