ಮಡಿಕೇರಿ, ಏ. ೨೨: ಕೋವಿಡ್ ದ್ವಿತೀಯ ಅಲೆ ಜಿಲ್ಲಾಧಿಕಾರಿ ಕಚೇರಿಯನ್ನೂ ಬಿಟ್ಟಿಲ್ಲ. ಶೀತ ಜ್ವರ ಲಕ್ಷಣ ಕಾಣಿಸಿಕೊಂಡಿದ್ದ ಮೂವರು ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸುಮಾರು ೨೦ ಮಂದಿ ಸಿಬ್ಬಂದಿಯನ್ನು ಆರ್.ಟಿ.ಪಿ.ಸಿ.ಆರ್ ಟೆಸ್ಟ್ಗೆ ಒಳಪಡಿಸಿ ಮನೆಗಳಿಗೆ ಕಳುಹಿಸಲಾಯಿತು.

ಉಳಿದಂತೆ ಕೇವಲ ೫ ಮಂದಿ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಗತ್ಯ ಸೇವೆಗಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಿ.ಸಿ. ಕಚೇರಿಯ ಬಹುತೇಕ ಸಿಬ್ಬಂದಿಯಲ್ಲಿ ಅನೇಕರು ಈಗಾಗಲೇ ಪ್ರಥಮ ಕೋವಿಡ್ ಲಸಿಕೆ ಪಡೆದವರಾಗಿದ್ದಾರೆ. ಇನ್ನೂ ಹಲವರು ದ್ವಿತೀಯ ಲಸಿಕೆಯನ್ನೂ ಪಡೆದುಕೊಂಡಿದ್ದಾರೆ. ಆದರೂ ಮೂವರಿಗೆ ಕೋವಿಡ್ ಬಂದಿದೆ.ಇದೀಗ ಬಹುತೇಕ ಮುಂದಿನ ಸೋಮವಾರದವರೆಗೆ ಸಾರ್ವಜನಿಕರು ಡಿ.ಸಿ ಕಚೇರಿಗೆ ತೆರಳಲು ಅವಕಾಶವಿಲ್ಲ ಎಂದು ಮೂಲಗಳು ತಿಳಿಸಿವೆ. ಏಕೆಂದರೆ ಅಲ್ಲ್ಲಿವರೆಗೆ ಸಿಬ್ಬಂದಿಯೂ ಕಚೇರಿಗೆ ತೆರಳುವದಿಲ್ಲ.

ಈ ನಡುವೆ, ಸುಂಟಿಕೊಪ್ಪದಲ್ಲಿ ಇತ್ತೀಚೆೆಗೆ ಜಿಲ್ಲಾಧಿಕಾರಿಯವರ ಆದೇಶದ ಮೇರೆಗೆ ೯ ಅಂಗಡಿಗಳನ್ನು ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆÀ ಬಂದ್ ಮಾಡಿಸಲಾಗಿತ್ತು. ಆ ಎಲ್ಲ ಅಂಗಡಿ ಮಾಲೀಕರು ಇಂದು ಜಿಲ್ಲಾಧಿಕಾರಿ ಕಚೇರಿಗೆ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳಲು ಬಂದಾಗ ಕೋವಿಡ್‌ನಿಂದಾಗಿ ಅವರ ಕಚೇರಿಗೆ ತೆರಳಲು ಪ್ರವೇಶಾವಕಾಶ ಸಿಗಲಿಲ್ಲ. ಬಳಿಕ ಅಂಗಡಿ ಮಾಲೀಕರು ಕೆಳಗೆ ಕಾದು ಡಿ.ಸಿ. ಅವರು ಕಾರಿಗೆ ಹತ್ತುವ ಸಂದರ್ಭ ಮನವಿ ಮಾಡಿದರು. ಈ ಕುರಿತು ತಾನು ಪರಿಶೀಲಿಸಿ ಕ್ರಮ ಕೈಗೊಳ್ಳುವದಾಗಿ ಅವರು ಭರವಸೆÀಯಿತ್ತುದಾಗಿ ತಿಳಿದುಬಂದಿದೆ.

ಸಾರ್ವಜನಿಕರಲ್ಲಿ ಏನಾದರೂ ಅಹವಾಲುಗಳಿದ್ದಲ್ಲಿ ಇಮೇಲ್ ಮೂಲಕ ಕಳುಹಿಸಿಕೊಡಬಹುದಾಗಿ ಜಿಲ್ಲಾಧಿಕಾರಿ ಕಚೇರಿ ಮೂಲಗಳು ತಿಳಿಸಿವೆ.