ಮಡಿಕೇರಿ, ಏ. ೨೨: ಕೋವಿಡ್ -೧೯ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿರುವುದನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಪ್ರತಿದಿನ ಮಾರ್ಗ ಸೂಚಿಗಳನ್ನು ಹೊರಡಿಸುತ್ತಿದೆ.

ಇದೀಗ ಇಂದು ಮಧ್ಯಾಹ್ನದ ವೇಳೆಗೆ ದಿಢೀರಾಗಿ ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಿದ್ದು, ರಾಜ್ಯಾದ್ಯಂತ ಅಗತ್ಯ ಸೇವೆಗಳ ಅಂಗಡಿ ಮಳಿಗೆಗಳ ಹೊರತುಪಡಿಸಿ ಉಳಿದೆಲ್ಲ ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಆದೇಶಿಸಿದೆ. ಇಂದು ಮಧ್ಯಾಹ್ನದಿಂದಲೇ ಪರಿಷ್ಕೃತ ಆದೇಶ ಜಾರಿಯಾಗಿದ್ದು, ಸರಕಾರದ ಆದೇಶದಂತೆ ಕಾರ್ಯಾಚರಣೆಗಿಳಿದ ಪೊಲೀಸರು ತೆರೆಯಲ್ಪಟ್ಟಿದ್ದ ಅಂಗಡಿ - ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ. ಮುಂದಿನ

(ಮೊದಲ ಪುಟದಿಂದ) ಮೇ ೪ರವರೆಗೆ ಈ ಆದೇಶ ಜಾರಿಯಲ್ಲಿರಲಿದ್ದು, ಅಲ್ಲಿಯವರೆಗೆ ಬಹುತೇಕ ಬಂದ್ (ಅರ್ಧ ಲಾಕ್‌ಡೌನ್) ಆಗಿರುತ್ತದೆ. ಕೊಡಗು ಜಿಲ್ಲೆಯಲ್ಲೂ ಈ ಆದೇಶ ಜಾರಿಯಾಗಿದೆ.

ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರಕಾರ ನಿನ್ನೆ ಹೊರಡಿಸಿದ್ದ ಮಾರ್ಗಸೂಚಿಯಲ್ಲಿ ವಾರದ ಎಲ್ಲಾ ದಿನಗಳಲ್ಲಿ ರಾತ್ರಿ ೯ ರಿಂದ ಬೆಳಿಗ್ಗೆ ೬ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು, ಶುಕ್ರವಾರ ರಾತ್ರಿ ೯ ಗಂಟೆಯಿAದ ಸೋಮವಾರ ಬೆಳಿಗ್ಗೆ ೬ ಗಂಟೆವರೆಗೆ ಎರಡು ದಿನಗಳ ಕಾಲ ಪೂರ್ಣ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಿತ್ತು. ವಾರಾಂತ್ಯದ ಕರ್ಫ್ಯೂ ವೇಳೆಯಲ್ಲಿ ಬೆಳಿಗ್ಗೆ ೬ ರಿಂದ ೧೦ ಗಂಟೆವರೆಗೆ ದಿನಸಿ, ಹಣ್ಣು, ಹಂಪಲು, ತರಕಾರಿ, ಹಾಲಿನ ಉತ್ಪನ್ನಗಳು, ಮಾಂಸ, ಮೀನು ಮಾರಾಟ ಮಳಿಗೆಗಳನ್ನು ಮಾತ್ರ ತೆರೆಯಲು ಅವಕಾಶ ನೀಡಲಾಗಿತ್ತು.

ಆದರೆ, ಇಂದು ಮಧ್ಯಾಹ್ನ ದಿಢೀರಾಗಿ ಪರಿಷ್ಕೃತ ಆದೇಶ ಹೊರಡಿಸಿದ ಸರಕಾರ ಅಗತ್ಯ ವಸ್ತುಗಳ ಮಾರಾಟ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡುವಂತೆ ಸೂಚಿಸಿದೆ. ಬೆಂಗಳೂರು ಸೇರಿದಂತೆ ಮಹಾನಗರ ಹಾಗೂ ಪಟ್ಟಣಗಳಲ್ಲಿ ಕೋವಿಡ್ -೧೯ ನಿಯಮಗಳ ಉಲ್ಲಂಘನೆಯಾಗುತ್ತಿರುವದರನ್ನು ಗಮನಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಈ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಕ್ರಮ ಜರುಗಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶಿಸಿದ ಹಿನ್ನೆಲೆಯಲ್ಲಿ ಮಧ್ಯಾಹ್ನದಿಂದಲೇ ದಿಢೀರಾಗಿ ಕಾರ್ಯಾಚರಣೆಗಿಳಿದ ಪೊಲೀಸರು ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.

ಕೊಡಗಿನಲ್ಲೂ ಬಂದ್ ಬಿಸಿ

ಕೊಡಗು ಜಿಲ್ಲಾ ಪೊಲೀಸ್ ಇಲಾಖೆಗೂ ಸೂಚನೆ ಬಂದ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಂತೆ ಡಿವೈಎಸ್‌ಪಿ ದಿನೇಶ್‌ಕುಮಾರ್, ವೃತ್ತನಿರೀಕ್ಷಕ ಅನೂಪ್ ಮಾದಪ್ಪ ನೇತೃತ್ವದಲ್ಲಿ ಮಡಿಕೇರಿ ನಗರ ಠಾಣಾಧಿಕಾರಿ ಅಂತಿಮ ಅವರು, ನಗರದಾದ್ಯಂತ ಸಂಚರಿಸಿ ಅಂಗಡಿ - ಮುಂಗಟ್ಟುಗಳನ್ನು ಬಂದ್ ಮಾಡಿಸಿದರು. ಸರಕಾರ ನಿನ್ನೆ ಹೊರಡಿಸಿದ್ದ ಆದೇಶದಲ್ಲಿ ಇತರ ಕ್ರಮಗಳು ಎಂದು ನಮೂದಿಸಿದ್ದ ಕಲಂ ಪ್ರಕಾರ ಪರಿಷ್ಕರಣೆ ಮಾಡಿ ಇಂದು ಮಧ್ಯಾಹ್ನ ಮರು ಆದೇಶ ಹೊರಡಿಸಿದ್ದು, ಅದರಂತೆ ಕ್ರಮಕೈಗೊಳ್ಳುತ್ತಿದ್ದೇವೆ. ಅಗತ್ಯ ಪೊರೈಕೆಗೆ ಮಾತ್ರ ಅವಕಾಶವಿದ್ದು, ಇನ್ನುಳಿದ ಅಂಗಡಿ - ಮಳಿಗೆಗಳು ಮೇ ೪ರವರೆಗೆ ಬಂದ್ ಆಗಿರಲಿವೆ ಎಂದು ಡಿವೈಎಸ್‌ಪಿ ದಿನೇಶ್‌ಕುಮಾರ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಬಂದ್!

ಕುಶಾಲನಗರ ಪಟ್ಟಣದಲ್ಲಿ ಸಂಜೆ ೬ ಗಂಟೆ ಬಳಿಕ ಅಗತ್ಯ ವಸ್ತುಗಳ ಪೂರೈಕೆಗಳ ಮಳಿಗೆಗಳನ್ನು ಹೊರತುಪಡಿಸಿ ಉಳಿದೆಲ್ಲ ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ. ಪಟ್ಟಣ ಪಂಚಾಯಿತಿ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆಗಿಳಿದು ಬಂದ್ ಮಾಡಲಾಗಿದೆ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಡಿವೈಎಸ್‌ಪಿ ಮಹೇಶ್ ದೇÀ್ವರ್ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರು. ಪಟ್ಟಣದಲ್ಲಿ ಇಂದಿನಿAದಲೇ ಬಹುತೇಕ ಬಂದ್ ಚಿತ್ರಣ ಗೋಚರಿಸಿದೆ.

ವೀರಾಜಪೇಟೆಯಲ್ಲಿ ಸ್ವಯಂಘೋಷಿತ ಬಂದ್

ವೀರಾಜಪೇಟೆ: ಕೋವಿಡ್ ಸೋಂಕು ಹರಡುವ ಭೀತಿಯಿಂದ ವೀರಾಜಪೇಟೆಯಲ್ಲಿ ಸ್ವಯಂಪ್ರೇರಿತವಾಗಿ ಕೆಲವು ಅಂಗಡಿ ಮಾಲೀಕರು ತಮ್ಮ ಅಂಗಡಿಯನ್ನು ಬಂದ್ ಮಾಡಿದ ದೃಶ್ಯ ಸಾಮಾನ್ಯವಾಗಿತ್ತು. ನಗರದಲ್ಲಿ ಜನರ ಸಂಚಾರ ಕೂಡಾ ಬಹಳ ವಿರಳವಾಗಿತ್ತು. ತೆರೆದಿದ್ದ ಅಂಗಡಿಗಳು ಕೂಡಾ ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು.

ವೀರಾಜಪೇಟೆಯ ಆರೋಗ್ಯ ಅಧಿಕಾರಿ ಹಾಗೂ ಫ್ಲಯಿಂಗ್ ಸ್ಕಾ÷್ವಡ್ ನ ಅಧಿಕಾರಿಗಳು ಇಂದು ವೀರಾಜಪೇಟೆಯ ಹೊಟೇಲ್ ಗಳಲ್ಲಿ ಮತ್ತು ಗುಂಪು-ಗುAಪಾಗಿ ವ್ಯಾಪಾರದಲ್ಲಿ ತೊಡಗಿದ್ದ ಜನರನ್ನು ಚದುರಿಸಿ, ಅವರಿಗೆ ಸಾಮಾಜಿಕ ಅಂತರ ಪಾಲನೆಗೆ ಸೂಚಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಇAದು ವೀರಾಜಪೇಟೆ ಪಟ್ಟಣ ಪಂಚಾಯತಿಯೂ ಪ್ರಕಟಣೆ ಹೊರಡಿಸಿದ್ದು, ಶುಕ್ರವಾರ ಬೆಳಿಗ್ಗೆಯಿಂದಲೇ ನಗರದಲ್ಲಿ, ಅಗತ್ಯ ವಸ್ತುಗಳಾದ ದಿನಸಿ, ಹಣ್ಣು-ಹಂಪಲು, ಮೀನು-ಮಾಂಸ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಾ ಅಂಗಡಿಗಳನ್ನು ಕಡ್ಡಾಯವಾಗಿ ಮುಚ್ಚತಕ್ಕದ್ದು ಎಂದು ತಿಳಿಸಿದೆ.

ಸರ್ಕಾರದ ಮಾರ್ಗದರ್ಶಿ ಸೂತ್ರದನ್ವಯ ವೀರಾಜಪೇಟೆಯಲ್ಲಿಯೂ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಮಿಕ್ಕ ಸೇವೆಗಳು, ವ್ಯಾಪಾರ ಮತ್ತು ವ್ಯವಹಾರಗಳು ಇರುವುದಿಲ್ಲ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಹೇಮ್ ಕುಮಾರ್ ಮಾಹಿತಿ ನೀಡಿದ್ದಾರೆ.