ಗೋಣಿಕೊಪ್ಪಲು, ಏ. ೨೧: ಕಾಫಿ ತೋಟದಲ್ಲಿ ವ್ಯಾಘ್ರನ ಸಂಚಾರ ದೃಢಪಟ್ಟಿದ್ದು, ಹೆಜ್ಜೆ ಗುರುತುಗಳು ಸಾಕ್ಷಿ ನೀಡುತ್ತಿವೆ. ಅಲ್ಲದೆ ಅರಣ್ಯ ಸಿಬ್ಬಂದಿಗಳು ತೋಟದ ವಿವಿಧ ಭಾಗದಲ್ಲಿ ಇಟ್ಟಿರುವ ಕ್ಯಾಮರಾದಲ್ಲಿ ಹುಲಿಯ ಓಡಾಟವು ಸೆರೆಯಾಗಿವೆ. ಬಾಳೆಲೆ ಹೋಬಳಿಯ ಪೊನ್ನಪ್ಪಸಂತೆ ಪಂಚಾಯಿತಿ ವ್ಯಾಪ್ತಿಯ ನಲ್ಲೂರು ಗ್ರಾಮದ ತೀತರಮಾಡ ಬೋಸ್ ಸುಬ್ಬಯ್ಯ ಎಂಬವರ ಹಸುವನ್ನು ಕಳೆದ ಎರಡು ದಿನಗಳ ಹಿಂದೆ ಹುಲಿಯು ದಾಳಿ ನಡೆಸಿ ಅರ್ಧ ಭಾಗವನ್ನು ತಿಂದು ಹಾಕಿತ್ತು. ಹಸು ಕಾಣೆಯಾಗಿರುವುದನ್ನು ಪತ್ತೆ ಹಚ್ಚಲು ಮನೆ ಮಾಲೀಕರು ತೋಟಕ್ಕೆ ತೆರಳಿದ ವೇಳೆ ಹಸುವು ಸತ್ತು ಬಿದ್ದಿರುವುದು ಕಂಡು ಬಂದಿದೆ. ಈ ಬಗ್ಗೆ ಮಾಲೀಕರು ರೈತ ಸಂಘದ ಮುಖಂಡರ ಸಮ್ಮುಖದಲ್ಲಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಹುಲಿ ಸೆರೆಗೆ ಬೋನಿಟ್ಟು ಕ್ಯಾಮರಾ ಅಳವಡಿಸುವಂತೆ ಒತ್ತಾಯಿಸಿದ್ದರು.

ತಡ ರಾತ್ರಿಯ ವೇಳೆ ಪೊನ್ನಂಪೇಟೆ ಅರಣ್ಯ ಇಲಾಖೆಯ ಆರ್‌ಎಫ್‌ಒ ರಾಜಪ್ಪ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಹುಲಿ ಸೆರೆಗೆ ಬೋನನ್ನು ಅಳವಡಿಸಿದ್ದರು. ಅಲ್ಲದೆ ಹುಲಿಯ ಚಲನ ವಲನದ ಬಗ್ಗೆ ಮಾಹಿತಿ ತಿಳಿಯಲು ಕ್ಯಾಮರಾ ಅಳವಡಿಸಿದ್ದರು. ಹುಲಿಯು ಮಧ್ಯರಾತ್ರಿಯ ವೇಳೆ ಆಗಮಿಸಿ ಹಸುವಿನ ಮಾಂಸವನ್ನು ತಿನ್ನುವ ದೃಶ್ಯವು ಹಾಗೂ ಎಳೆದೊಯ್ಯುವ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಕೆಲವು ದಿನಗಳಿಂದ ಬಾಳೆಲೆ ವ್ಯಾಪ್ತಿಯಲ್ಲಿ ಹುಲಿಯೂ ಬೀಡು ಬಿಟ್ಟಿದ್ದು ೭ ಹಸುಗಳನ್ನು ಆಸುಪಾಸಿನಲ್ಲಿ ಬಲಿ ತೆಗೆದುಕೊಂಡಿದೆ.

(ಮೊದಲ ಪುಟದಿಂದ) ಹುಲಿ ಸಂಚಾರದ ಬಗ್ಗೆ ಹೆಜ್ಜೆ ಗುರುತು ಗಳು ಕಂಡು ಬಂದಿದ್ದವು. ಭಯದ ವಾತಾವರಣದಲ್ಲಿಯೇ ತೋಟದ ಕಾರ್ಮಿಕರು ಕೆಲಸ ನಿರ್ವಹಿಸುವ ಅನಿವಾರ್ಯತೆ ಬಂದೊದಗಿದೆ.

ನಲ್ಲೂರು ಗ್ರಾಮದ ತೀತರಮಾಡ ಬೋಸ್ ಸುಬ್ಬಯ್ಯ ಎಂಬುವರ ಹಸುವನ್ನು ಮಹಜರು ಮಾಡಲು ಅರಣ್ಯ ಇಲಾಖೆಯ ಸಿಬ್ಬಂದಿಗ ಳೊಂದಿಗೆ ಗ್ರಾಮಸ್ಥರು, ರೈತ ಸಂಘದ ಪದಾಧಿಕಾರಿಗಳು ಮಂಗಳವಾರ ಸಂಜೆ ೭ ಗಂಟೆಯ ಸುಮಾರಿಗೆ ತೋಟದ ಬಳಿ ತೆರಳಿದಾಗ ಅನತಿ ದೂರದಲ್ಲಿ ಹುಲಿಯು ಕಾಣಿಸಿಕೊಂಡಿದ್ದು ಯಾವುದೇ ಭಯವಿಲ್ಲದೆ ಹಸುವಿನ ಮಾಂಸವನ್ನು ತಿನ್ನಲು ಹುಲಿಯು ಆಗಮಿಸಿತ್ತು. ಭಾರೀ ಗಾತ್ರದ ಹುಲಿಯು ಸ್ಥಳದಲ್ಲಿದ್ದ ಅಧಿಕಾರಿ ಗಳನ್ನು ಹಾಗೂ ಗ್ರಾಮಸ್ಥರನ್ನು ಕಂಡು ಘರ್ಜಿಸಿದೆ.! ಇದರಿಂದ ಗಾಬರಿಗೊಂಡ ಇವರು ಸ್ಥಳದಿಂದ ವಾಪಸ್ಸಾಗಿದ್ದರು. ಮುಂಜಾನೆ ತೆರಳಿ ಕ್ಯಾಮರಾವನ್ನು ಪರಿಶೀಲಿಸಿದ ವೇಳೆ ಹುಲಿಯ ಚಿತ್ರ ಸೆರೆಯಾಗಿರುವುದು ಗೋಚರಿಸಿದೆ.