ರಾಜ್ಯದಲ್ಲಿ ಕೊರೊನಾ ಸ್ಫೋಟ: ಒಂದೇ ದಿನ ೨೩,೫೫೮ ಮಂದಿಗೆ ಪಾಸಿಟಿವ್

ಬೆಂಗಳೂರು, ಏ. ೨೧: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಇಂದು ದಾಖಲೆಯ ೨೩,೫೫೮ ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ ೧೨,೨೨,೨೦೨ಕ್ಕೆ ಏರಿಕೆಯಾಗಿದೆ. ಕಳೆದ ೨೪ ಗಂಟೆಯಲ್ಲಿ ರಾಜ್ಯದಲ್ಲಿ ೧೧೬ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ ೧೩,೬೪೬ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ೧೩,೬೪೦ ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ ೫,೮೩,೬೭೫ಕ್ಕೆ ಏರಿಕೆಯಾಗಿದೆ. ನಗರದಲ್ಲಿ ಸೋಂಕಿಗೆ ೭೦ ಮಂದಿ ಬಲಿಯಾಗಿದ್ದಾರೆ. ರಾಜ್ಯದಲ್ಲಿ ಇಂದು ೬,೩೧೨ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿAದ ಚೇತರಿಸಿಕೊಂಡವರ ಸಂಖ್ಯೆ ೧೦,೩೨,೨೩೩ಕ್ಕೆ ಏರಿಕೆಯಾಗಿದೆ. ೧,೭೬,೧೮೮ ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ೯೦೪ ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

೧೫ ದಿನದ ಸಾರಿಗೆ ಮುಷ್ಕರಕ್ಕೆ ತಾತ್ಕಾಲಿಕ ಬಿಡುಗಡೆ

ಬೆಂಗಳೂರು, ಏ. ೨೧: ಸತತ ೧೫ ದಿನಗಳ ಸಾರಿಗೆ ಮುಷ್ಕರಕ್ಕೆ ತಾತ್ಕಾಲಿಕ ಬಿಡುಗಡೆ ನೀಡಲಾಗುವುದು ಎಂದು ಬೆಂಗಳೂರಿನಲ್ಲಿ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ. ೧.೨ ಲಕ್ಷ ಸಾರಿಗೆ ನೌಕರರು ತಮ್ಮ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದಾರೆ. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿ ಸೇವೆಗೆ ಹಾಜರಾಗುತ್ತಾರೆ. ಸದ್ಯ ಮುಷ್ಕರವನ್ನು ಮುಂದೂಡುತ್ತೇವೆ. ಆದರೆ ಇದು ತಾತ್ಕಾಲಿಕವಷ್ಟೇ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಸಾರಿಗೆ ಸಿಬ್ಬಂದಿ ಮುಷ್ಕರದಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿದೆ. ನ್ಯಾಯಮೂರ್ತಿಗಳ ಹೇಳಿಕೆಯನ್ನು ನಾವು ಗೌರವಿಸುತ್ತೇವೆ. ಕೋವಿಡ್ ಕಾರಣದಿಂದ ಕರ್ತವ್ಯಕ್ಕೆ ಹಾಜರಾಗಿ. ಇದರಿಂದ ಜನರಿಗೆ ತೊಂದರೆ ಕೊಡಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ಹೈಕೋರ್ಟ್ ಆದೇಶದಂತೆ ಕರ್ತವ್ಯಕ್ಕೆ ಹಾಜರಾಗುತ್ತೇವೆ ಎಂದು ತಿಳಿಸಿದರು. ಆದರೆ, ಮುಷ್ಕರದ ವೇಳೆ ೨೧೬೯ ಮಂದಿ ವಜಾ ಮಾಡಲಾಗಿದೆ. ೨೯೪೧ ಮಂದಿಯನ್ನು ಅಮಾನತು ಮಾಡಲಾಗಿದೆ. ೭೬೪೬ ಮಂದಿಗೆ ಶೋಕಾಸ್ ನೋಟೀಸ್ ನೀಡಿದೆ. ೮ ಸಾವಿರ ಮಂದಿಯನ್ನು ವರ್ಗಾವಣೆ ಮಾಡಲಾಗಿದೆ. ಒಟ್ಟು ೨೦ ಸಾವಿರ ನೌಕರರ ಮೇಲೆ ದಮನಕಾರಿ ನೀತಿ ಅನುಸರಿಸಲಾಗಿದೆ. ಸರ್ಕಾರದ ಈ ಎಲ್ಲಾ ನಿರ್ಧಾರ ವಾಪಸ್ ಪಡೆಯಬೇಕು. ನೌಕರರ ವಿರುದ್ಧ ಕೈಗೊಂಡ ಕ್ರಮ ಕೈಬಿಡಬೇಕು ಎಂದು ಹೇಳಿದರು.

ನಾಸಿಕ್ ಆಸ್ಪತ್ರೆಯ ಆಕ್ಸಿಜನ್ ದುರಂತ: ೨೨ ಮಂದಿ ಸಾವು

ನಾಸಿಕ್, ಏ. ೨೧: ನಾಸಿಕ್‌ನ ಜಾಕಿರ್ ಹುಸೇನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಟ್ಯಾಂಕ್ ಸೋರಿಕೆಯಿಂದಾಗಿ ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೨೦ ಕೋವಿಡ್-೧೯ ರೋಗಿಗಳೂ ಸೇರಿ ಒಟ್ಟು ೨೨ ಮಂದಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬAಧಿಸಿದAತೆ ತೀವ್ರ ಸಂತಾಪ ಸೂಚಿಸಿದ ಮಹಾರಾಷ್ಟç ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಮೃತರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಈ ಘಟನೆಯಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬ ವ್ಯಕ್ತಿಯ ರಕ್ತಸಂಬAಧಿಗೆ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು. ಈ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದಂತೆ ನಾನು ಜನರಿಗೆ ಮನವಿ ಮಾಡುತ್ತೇನೆ ಎಂದು ಉದ್ಧವ್ ಠಾಕ್ರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ನಾಸಿಕ್ ಮಹಾನಗರ ಪಾಲಿಕೆಯ ಕೋವಿಡ್-೧೯ ನಿಯೋಜಿತ ಆಸ್ಪತ್ರೆ ಇದಾಗಿದ್ದು, ವೆಂಟಿಲೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ೨೨ ಮಂದಿ ಸಾವನ್ನಪ್ಪಿದ್ದಾರೆ. ಈ ಸೋರಿಕೆಯಿಂದ ಆಕ್ಸಿಜನ್ ಪೂರೈಕೆ ಕುಸಿದು ರೋಗಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಒಟ್ಟಾರೆ ೧೫೦ ರೋಗಿಗಳ ಪೈಕಿ ೧೨೭ ಮಂದಿಗೆ ಆಕ್ಸಿಜನ್ ನೀಡಲಾಗುತ್ತಿತ್ತು.

ಉಸ್ತುವಾರಿಗಳಿಗೆ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡುವಂತೆ ಸೂಚನೆ

ಬೆಂಗಳೂರು, ಏ. ೨೧: ವೈರಾಣು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲಿಯೂ ಸಹ ತ್ವರಿತವಾಗಿ ಕ್ರಮ ಕೈಗೊಳ್ಳುವುದು ಅಗತ್ಯವಾಗಿರುವ ಹಿನ್ನೆಲೆ ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿ ವಾಸ್ತವ್ಯ ಹೂಡುವಂತೆ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸಿಎಂ ಯಡಿಯೂರಪ್ಪ ಪತ್ರ ಬರೆದಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಉಸ್ತುವಾರಿ ಜಿಲ್ಲೆಯಲ್ಲಿಯೇ ವಾಸ್ತವ್ಯ ಮಾಡಿ ಪರಿಸ್ಥಿತಿ ಅವಲೋಕಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ವೈರಾಣು ಹರಡುವಿಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಿ ಜಿಲ್ಲಾಡಳಿತದೊಂದಿಗೆ ಸತತ ಸಂಪರ್ಕದಲ್ಲಿದ್ದು, ಸಾರ್ವಜನಿಕರಲ್ಲಿ ವೈರಸ್ ಹರಡುವಿಕೆಯ ನಿಯಂತ್ರಣ ಕುರಿತು ಮುನ್ನೆಚ್ಚರಿಕೆ ಕೈಗೊಳ್ಳುವ ಕುರಿತು ಹಾಗೂ ಸೋಂಕಿತರಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಂಡು ಪರಿಸ್ಥಿತಿ ಉಲ್ಬಣವಾಗದಂತೆ ಕ್ರಮ ವಹಿಸಬೇಕು. ಕೋವಿಡ್ -೧೯ ವೈರಾಣುವಿನ ೨ನೇ ಅಲೆಯು ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರವು ಸಮರೋಪಾದಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಿಎಂ ಪತ್ರದಲ್ಲಿ ತಿಳಿಸಿದ್ದಾರೆ.

ಕೊರೊನಾ ಕರ್ಫ್ಯೂ; ಪೊಲೀಸರಿಗೆ ಗೃಹಸಚಿವರ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು, ಏ. ೨೧: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬAಧಪಟ್ಟAತೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೋವಿಡ್ ನಿಯಂತ್ರಣಕ್ಕೆ ಸಂಬAಧಿಸಿದAತೆ ಬುಧವಾರ ಬೆಂಗಳೂರಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ನಡೆಸಿದ ಮಹತ್ವದ ಸಭೆಯಲ್ಲಿ ಅವರು ಈ ಕಟ್ಟುನಿಟ್ಟಿನ ಸೂಚನೆ ನೀಡಿದರು. ಸೋಂಕು ಹರಡುವಿಕೆ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ತೆಗೆದುಕೊಳ್ಳುವ ಕ್ರಮಗಳ ಪರಾಮರ್ಶೆಗೆ ಮತ್ತು ಮಾರ್ಗಸೂಚಿಗಳನ್ನು ಪಾಲನೆ ಮಾಡುವ ನಿಟ್ಟಿನಲ್ಲಿ ಎಡಿಜಿಪಿ ಮಟ್ಟದ ಅಧಿಕಾರಿಗಳನ್ನು ವಲಯವಾರು ನಿಯೋಜಿಸಲಾಗಿದೆ. ಸರ್ಕಾರ ಜಾರಿಗೊಳಿಸಿರುವ ಕಠಿಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧಿಕಾರಿಗಳು ನಿಗಾ ವಹಿಸಲಿದ್ದಾರೆ. ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕೋವಿಡ್ ನಿಯಂತ್ರಿಸಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ. ಕೋವಿಡ್ ನಿಯಂತ್ರಣದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಬೇಕು. ಎಸ್‌ಡಿಆರ್‌ಎಫ್ ಅಡಿ ಹತ್ತು ಕೋಟಿ ರೂಪಾಯಿ ನೆರವು ಕೋರಲಾಗಿದೆ ಎಂದು ಬೊಮ್ಮಾಯಿ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ಟೀಲ್ ಕಂಪೆನಿಗಳಿAದ ಆಕ್ಸಿಜನ್ ಪಡೆಯಲು ನಿರ್ಧಾರ

ಬೆಂಗಳೂರು, ಏ. ೨೧: ರಾಜ್ಯದಲ್ಲಿ ಕೊರೊನಾ ರೋಗಿಗಳಿಗೆ ಆಕ್ಸಿಜನ್ ಕೊರತೆ ತೀವ್ರಗೊಂಡಿರುವ ಹಿನ್ನೆಲೆ ಗಣಿ ಸಚಿವ ಮುರುಗೇಶ್ ನಿರಾಣಿ ಅವರು ಬುಧವಾರ ಸ್ಟೀಲ್ ಕಂಪೆನಿಗಳ ಜೊತೆ ಸಭೆ ನಡೆಸಿದರು. ಇಂದು ವಿಕಾಸಸೌಧಲ್ಲಿ ನಡೆದ ಸಭೆಯಲ್ಲಿ ಸ್ಟೀಲ್ ಕಂಪನಿಗಳಿAದ ಆಕ್ಸಿಜನ್ ಪಡೆಯುವ ಬಗ್ಗೆ ಚರ್ಚಿಸಿ ಗಣಿಗಾರಿಕೆಗೆ ಉಪಯೋಗವಾಗುವ ಆಕ್ಸಿಜನ್ ಬಳಸಿಕೊಳ್ಳಲು ನಿರ್ಧರಿಸಲಾಯಿತು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರುಗೇಶ್ ನಿರಾಣಿ, ರಾಜ್ಯದಲ್ಲಿ ಕೋವಿಡ್ ಹೆಚ್ಚಾಗುತ್ತಿರುವುದರಿಂದ ಆಕ್ಸಿಜನ್ ಕೊರತೆ ಕಂಡುಬAದಿದೆ. ಪ್ರಸ್ತುತ ಜಿಂದಾಲ್‌ನಿAದ ೪೦೦ ಟನ್ ಆಕ್ಸಿಜನ್ ಸಿಗುತ್ತಿದೆ. ಬೇರೆ ಸ್ಟೀಲ್ ಪ್ಲಾಂಟ್ ನವರಿಂದ ೨೦೦ ಟನ್ ಸಿಗಲಿದ್ದು, ಒಟ್ಟು ೬೦೦ ಟನ್ ಪ್ರತಿದಿನ ಆಕ್ಸಿಜನ್ ಸಿಗಲಿದೆ. ನಮ್ಮ ರಾಜ್ಯಕ್ಕೆ ಪ್ರತಿದಿನ ೬೦೦ ಟನ್ ಆಕ್ಸಿಜನ್ ಸಾಕಾಗಲಿದೆ ಎಂದರು. ಬಲ್ಡೋಟಾ ಗಣಿ ಕಂಪೆನಿ ಬಂದ್ ಮಾಡಿದ್ದರಿಂದ ಈಗ ಅನಿವಾರ್ಯವಾಗಿ ನಮಗೆ ಆಕ್ಸಿಜನ್ ಬೇಕಾಗಿದೆ. ಹಾಗಾಗಿ ಅವರಿಗೆ ಮರುಪ್ರಾರಂಭಿಸುವAತೆ ಸೂಚಿಸಿದ್ದೇವೆ. ಪ್ರಸ್ತುತ ಸಿಗುತ್ತಿದ್ದ ಆಕ್ಸಿಜನ್ ಕೈಗಾರಿಕೆಗೆ ಸಾಕಾಗುತ್ತಿತ್ತು. ಜೆಎಸ್ ಡಬ್ಲ್ಯೂ ಸ್ಟೀಲ್ ಕಂಪೆನಿ ಜೊತೆಗೆ ಬೇರೆ ಸ್ಟೀಲ್ ಕಂಪೆನಿಗಳ ಜೊತೆಯೂ ಸಭೆ ನಡೆಸಿ ಆಕ್ಸಿಜನ್ ಉತ್ಪಾದಿಸಲು ಸೂಚಿಸಲಾಗಿದೆ ಎಂದರು. ರೋಗಿಗಳ ಸಂಖ್ಯೆ ಹೆಚ್ಚಾದರೆ ಆಕ್ಸಿಜನ್ ಪ್ರಮಾಣವೂ ಹೆಚ್ಚು ಬೇಕಾಗುತ್ತದೆ. ಎಷ್ಟು ಬೇಕು ಎಂಬುದರ ಬಗ್ಗೆ ನಿಖರವಾದ ಮಾಹಿತಿಯಿಲ್ಲ. ಈ ಬಗ್ಗೆ ಆರೋಗ್ಯ ಸಚಿವರ ಜೊತೆ ಚರ್ಚಿಸಬೇಕು. ನಾನೇ ಖುದ್ದು ಅಕ್ಸಿಜನ್ ವಿಚಾರದಲ್ಲಿ ಮುಂದೆ ಬಂದಿದ್ದೇನೆ. ಮುಂದೆ ಬಂದು ಸ್ಟೀಲ್ ಕಂಪೆನಿಗಳ ಜೊತೆ ಚರ್ಚಿಸಿರುವುದಾಗಿ ಮುರುಗೇಶ್ ನಿರಾಣಿ ಹೇಳಿದರು.