ಮಡಿಕೇರಿ, ಏ. ೨೧: ೨೦೧೮ ರಲ್ಲಿ ನಡೆದ ಕೊಡವ ಕುಟುಂಬಗಳ ನಡುವಿನ ಕುಲ್ಲೇಟಿರ ಕಪ್ ಹಾಕಿ ಹಬ್ಬಕ್ಕೆ ಸರ್ಕಾರದಿಂದ ಬರಲು ಬಾಕಿ ಇದ್ದ ೪೦ ಲಕ್ಷ ರೂ.ಗಳಲ್ಲಿ ೨೫ ಲಕ್ಷಗಳನ್ನು ಬಿಡುಗಡೆ ಮಾಡಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ನಾರಾಯಣಗೌಡ ಅವರ ಅನುಪಸ್ಥಿತಿಯಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಇಂದು ಕುಲ್ಲೇಟಿರ ಕುಟುಂಬದ ಪ್ರಮುಖರಿಗೆ ಬೆಂಗಳೂರಿನಲ್ಲಿ ಸಚಿವರ ಕಚೇರಿಯಲ್ಲಿ ಚೆಕ್ ಹಸ್ತಾಂತರಿಸಿದರು.
ಉಳಿದಿರುವ ೧೫ ಲಕ್ಷ ರೂ.ಗಳನ್ನು ಕೂಡ ಸರ್ಕಾರ ಶೀಘ್ರ ಬಿಡುಗಡೆ ಮಾಡಲಿದೆ ಎನ್ನುವ ವಿಶ್ವಾಸವನ್ನು ಹಾಕಿ ಹಬ್ಬದ ಕಾರ್ಯದರ್ಶಿ ಹಾಗೂ ನಾಪೋಕ್ಲು ಕೊಡವ ಸಮಾಜದ ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ ವ್ಯಕ್ತಪಡಿಸಿದ್ದಾರೆ.
ಕೊಡಗು ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಅವರ ನೇತೃತ್ವದಲ್ಲಿ ಒಂದು ತಿಂಗಳ ಹಿಂದೆಯಷ್ಟೇ ಕ್ರೀಡಾ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಈ ಬಗ್ಗೆ ಭೇಟಿಯಾಗಿತ್ತು. ತಡವಾಗಿಯಾದರೂ ಅನುದಾನ ಬಿಡುಗಡೆ ಮಾಡಿರುವುದು ತೃಪ್ತಿ ತಂದಿದೆ ಎಂದರು.
ಚೆಕ್ ಹಸ್ತಾಂತರದ ಸಂದರ್ಭ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರು ಹಾಗೂ ವಕೀಲರೂ ಆದ ಎಂ.ಟಿ. ನಾಣಯ್ಯ, ಪ್ರಮುಖರಾದ ಮುಕ್ಕಾಟಿರ ಪೂಣಚ್ಚ (ಬಾಬಾ), ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಆಯುಕ್ತ ರವೀಂದ್ರ, ಕ್ರೀಡಾ ಸಚಿವ ನಾರಾಯಣಗೌಡ ಅವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.