*ವೀರಾಜಪೇಟೆ, ಏ. ೨೧: ವೀರಾಜಪೇಟೆಯಲ್ಲಿ ಕಸ ಸಂಗ್ರಹಣೆಗಾಗಿ ಪೌರಕಾರ್ಮಿಕರು ಹಗಲಿರುಳು ಶ್ರಮಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಪ್ರತಿದಿನ ಮತ್ತು ರಾತ್ರಿ ಪಟ್ಟಣ ಪಂಚಾಯಿತಿಯಿAದ ಪೌರಕಾರ್ಮಿಕರು ಕಸ ಸಂಗ್ರಹಣೆ ವಾಹನದಲ್ಲಿ ಮನೆ-ಮನೆಗೆ ತೆರಳಿ ಸಾರ್ವಜನಿಕರಿಂದ ಕಸ ಸಂಗ್ರಹಿಸಿ ಆ ಕಸವನ್ನು ಪೆರುಂಬಾಡಿಯ ಕಸ ವಿಲೇವಾರಿ ಘಟಕಕ್ಕೆ ಕೊಂಡೊಯ್ದು ಕಸ ವಿಂಗಡಣೆ ಮಾಡಲಾಗುತ್ತದೆ. ಒಂದು ಹಂತಕ್ಕೆ ಅತ್ಯಂತ ವ್ಯವಸ್ಥಿತವಾಗಿ ವೀರಾಜಪೇಟೆ ನಗರದ ಕಸ ವಿಲೇವಾರಿಯಾಗುತ್ತಿದೆ.

ಆದರೆ ನಗರದ ವೀರಾಜಪೇಟೆ-ಗೋಣಿಕೊಪ್ಪ ಮುಖ್ಯ ರಸ್ತೆಯ ಟೆಂಡರ್ ಚಿಕನ್ ಅಂಗಡಿಯ ಎದುರಿನ ಜಾಗದಲ್ಲಿ, ಮೂರ್ನಾಡು ರಸ್ತೆಯ ಕೆಳಭಾಗದಲ್ಲಿ, ಹೀಗೆ ಕೆಲವು ಜಾಗಗಳನ್ನು ಸಾರ್ವಜನಿಕರೇ ಕದ್ದುಮುಚ್ಚಿ ಕಸ ತಂದು ಸುರಿಯುವ ಜಾಗಗಳಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಪಟ್ಟಣ ಪಂಚಾಯಿತಿ ಎಷ್ಟೇ ಮುತುರ್ವಜಿ ವಹಿಸಿ ಕಸ ಸಂಗ್ರಹಣೆ ಮಾಡಿದರೂ ಕೂಡಾ, ಅವರ ಕಣ್ತಪ್ಪಿಸಿ ರಸ್ತೆ ಬದಿ ಕಸ ಸುರಿದು ಊರ ಮಧ್ಯೆ ತಿಪ್ಪೆ ಸೃಷ್ಟಿಮಾಡಿ, ಅಲ್ಲಿ ಓಡಾಡುವ ನಾಗರಿಕರಿಗೆ, ಆಟೋ ಚಾಲಕರಿಗೆ ದುರ್ನಾತದ ಭಾಗ್ಯವನ್ನು ಉಚಿತವಾಗಿ ನೀಡುತ್ತಿದ್ದಾರೆ ಕೆಲವು ಸಾರ್ವಜನಿಕರು.

ಈ ಬಗ್ಗೆ ಪಟ್ಟಣ ಪಂಚಾಯಿತಿಯ ಹಲವು ಸಭೆಗಳಲ್ಲಿ ಚರ್ಚೆಯಾಗಿ ಇದೀಗ ಪಟ್ಟಣ ಪಂಚಾಯತಿಯ ಕಣ್ತಪ್ಪಿಸಿ ರಸ್ತೆಗೆ ಕಸ ತಂದು ಸುರಿಯುವ ಜನರ ಮೇಲೆ ಹದ್ದಿನ ಕಣ್ಣು ಇಡಲು ಮುಖ್ಯಾಧಿಕಾರಿ, ಮುಖ್ಯ ಅಭಿಯಂತರರು ಮತ್ತು ಸದಸ್ಯರ ನೇತೃತ್ವದಲ್ಲಿ ತಂಡಗಳನ್ನು ರಚನೆ ಮಾಡಿಕೊಂಡು ಕಾರ್ಯಾಚರಣೆಗೆ ಇಳಿಯಲಾಗಿದೆ. ಬುಧವಾರ ಬೆಳಿಗ್ಗೆಯೇ ಪಟ್ಟಣ ಪಂಚಾಯಿತಿಯ ಈ ತಂಡ ರಸ್ತೆಗೆ ಎಲ್ಲಿಂದಲೋ ವಾಹನಗಳಲ್ಲಿ, ಕಾಲ್ನಡಿಗೆಯಲ್ಲಿ ಕಸ ತಂದು ಸುರಿಯುವ ಸಾರ್ವಜನಿಕರನ್ನು ಹಿಡಿದು ದಂಡ ವಿಧಿಸಿದೆ.

ಬಿಟ್ಟಂಗಾಲದ ನಿವಾಸಿಯೊಬ್ಬರು ಗೋಣಿಚೀಲದಲ್ಲಿ ಕಸ ತುಂಬಿಸಿಕೊAಡು ವೀರಾಜಪೇಟೆ ನಗರದ ಟೆಂಡರ್ ಚಿಕನ್ ಅಂಗಡಿಯ ಖಾಲಿ ಜಾಗದಲ್ಲಿ ಸುರಿಯುತ್ತಿದ್ದಾಗ ಅಲ್ಲಿಗೆ ಬಂದ ಪಟ್ಟಣ ಪಂಚಾಯಿತಿಯ ತಂಡ ಅವರನ್ನು ಹಿಡಿದು, ೫೦೦ ರೂಪಾಯಿ ದಂಡ ವಿಧಿಸಿದೆ. ಅದೇ ರೀತಿ ಕೆಲವು ಬಡಾವಣೆಗಳ ಸಾರ್ವಜನಿಕರು ಪ್ಲಾಸ್ಟಿಕ್‌ನಲ್ಲಿ ಕಸ ತಂದು ನಗರದ ರಸ್ತೆಯಲ್ಲಿ ಸುರಿಯುವಾಗ ಪ.ಪಂ. ತಂಡದ ಕೈಗೆ ಸಿಕ್ಕಿಬಿದ್ದು ಬೆಳಂಬೆಳ್ಳಿಗ್ಗೆ ೫೦೦ ರೂಪಾಯಿ ದಂಡ ಹಾಕಿಸಿಕೊಂಡಿದ್ದಾರೆ.

ಈ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಹೇಮ್‌ಕುಮಾರ್ ಅವರು, ವೀರಾಜಪೇಟೆ ನಗರದಲ್ಲಿ ಪಟ್ಟಣ ಪಂಚಾಯಿತಿಯಿAದ ಕಸ ವಿಲೇವಾರಿ ಬಗ್ಗೆ ಪ್ರತಿದಿನ ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುತ್ತಲೇ ಇದ್ದೇವೆ. ಅಲ್ಲದೇ ಹಸಿ ಮತ್ತು ಒಣ ಕಸ ಪ್ರತ್ಯೇಕಿಸಿಕೊಡಿ ಎಂದು ಕೂಡ ಮನವಿ ಮಾಡುತ್ತಿದ್ದೇವೆ. ಆದರೂ ಕೂಡಾ ಸಾರ್ವಜನಿಕರು ಈ ರೀತಿ ಎಲ್ಲೆಂದರಲ್ಲಿ ಕಸ ಹಾಕುವುದು ತಪ್ಪು. ಇದನ್ನು ತಡೆದು ನಗರವನ್ನು ಸ್ವಚ್ಛವಾಗಿಡುವ ಸಲುವಾಗಿ ಪಟ್ಟಣ ಪಂಚಾಯಿತಿಯಿAದ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಇನ್ನು ಮುಂದೆ ಈ ರೀತಿ ಸಾರ್ವಜನಿಕರು ಕಸ ಸಂಗ್ರಹಿಸುವ ವಾಹನ ಬಿಟ್ಟು ಎಲ್ಲೆಂದರಲ್ಲಿ ಕಸ ಸುರಿದರೆ ದಂಡ ವಿಧಿಸಲಾಗುವುದು ಎಂದರು.

ಪರೀಶೀಲನೆ ವೇಳೆ ಪಟ್ಟಣ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ರಾಫಿ ಇದ್ದರು. - ಉಷಾ ಪ್ರೀತಮ್