ಮಡಿಕೇರಿ, ಏ. ೧೯: ಮಡಿಕೇರಿ ನಗರದ ನೂತನ ನಗರಸಭಾ ಸದಸ್ಯರುಗಳ ಚುನಾವಣೆ ಘೋಷಣೆಯಾಗಿ ತಾ. ೨೭ ರಂದು ಮತದಾನವೂ ನಡೆೆಯಲಿದೆ. ಈ ಸಂದರ್ಭ ಮಡಿಕೇರಿ ನಗರಸಭಾ ಅಧಿಕಾರಿಗಳ ಆಡಳಿತದ ವೈಖರಿಯಲ್ಲಿ ನಗರದ ಹೃದಯ ಭಾಗದಲ್ಲಿ ಅಂಗಡಿ ಮಳಿಗೆಯೊಂದನ್ನು ತಯಾರಿಸಿ ತಂದು ಕೂರಿಸಿರುವ ವಿದ್ಯಮಾನ ನಾಗರಿಕರ ಹುಬ್ಬೇರುವಂತೆ ಮಾಡಿದೆ. ನಿಜಕ್ಕೂ ಬಲು ನಾಜೂಕಾಗಿ, ಚಾಕ ಚಕ್ಯತೆಯಿಂದ ಇಂತಹ ಅನಧಿಕೃತ ಮಳಿಗೆಗಳ ಸ್ಥಾಪನೆಗೆ ಆಸ್ಪದ ಕೊಡುತ್ತಿರುವದು ಯಾರು ಎಂದು ನಾಗರಿಕರು ಪ್ರಶ್ನಿಸಿದ್ದಾರೆ.

(ಮೊದಲ ಪುಟದಿಂದ) ನಗರದ ಅಂಚೆ ಇಲಾಖಾ ಕಚೇರಿಯ ಎದುರು ಭಾಗ ಹಾಪ್ ಕಾಂ ಸಂಕೀರ್ಣದ ಸನಿಹ ದಿಢೀರ್ ಮಳಿಗೆಯೊಂದು ತಲೆ ಎತ್ತಿ ನಿಂತಿದೆ. ಈ ಜಾಗದಲ್ಲಿ ನಾಗರಿಕರು ತಮ್ಮ ವಾಹನಗಳನ್ನು ನಿಲ್ಲಿಸಲು ಸದುಪಯೋಗವಾಗುತ್ತಿದ್ದು ಇದೀಗ ಇಡೀ ಪರಿಸರದಲ್ಲಿ ಅಡ್ಡಗೋಡೆÀಯಂತೆ ಈ ಮಳಿಗೆಯನ್ನು ಸ್ಥಾಪಿಸಲಾಗಿದೆ. ನಗರದ ಆಸ್ತಿಯನ್ನು ಮೋಜಿನಾಟದ ರೀತಿ ಅಧಿಕಾರಿಗಳು ಪರಭಾರೆ ಮಾಡುತ್ತಿರುವದು ಹೇಗೆ, ಇವರಿಗೆ ಈ ಅಧಿಕಾರ ಕೊಟ್ಟರ‍್ಯಾರು? ಇದರ ಹಿನ್ನೆಲೆಯಲ್ಲಿ ಇನ್ಯಾವ ವ್ಯವಹಾರ ನಡೆದಿದೆ ಎಂಬದು ನಾಗರಿಕರ ಪ್ರಶ್ನೆ. ಈ ದಿಸೆಯಲ್ಲಿ ನಗರಸಭಾ ಆಡಳಿತಾಧಿಕಾರಿಯವರಾದ ಜಿಲ್ಲಾಧಿಕಾರಿಯವರು ಹಾಗೂ ಶಾಸಕರು ಮುತುವರ್ಜಿ ವಹಿಸಿ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಬೀದಿ ಬದಿ ವ್ಯಾಪಾರಿಗಳು ತಮ್ಮ ಜೀವನ ನಿರ್ವಹಣೆಗೋಸ್ಕರ ತಾತ್ಕಾಲಿಕ ವ್ಯವಸ್ಥೆಯಲ್ಲಿ ವ್ಯಾಪಾರ ನಡೆಸಿದರೆ ಅಂತಹವರನ್ನು ತೆರವುಗೊಳಿಸಲಾಗುತ್ತದೆ; ಆದರೆ, ನಗರದ ಪ್ರಮುಖ ಸ್ಥಳದಲ್ಲಿ ಶಾಶ್ವತ ಮಳಿಗೆ ಸ್ಥಾಪಿಸಲು ಅವಕಾಶ ನೀಡುತ್ತಿರುವದು ಯಾವ ನ್ಯಾಯ ಎಂದು ನಾಗರಿಕರು ಪ್ರಶ್ನಿಸಿದ್ದಾರೆ. - ಸತೀಶ್ ಟಿ.ಜಿ., ಮಡಿಕೇರಿ