ಮಡಿಕೇರಿ, ಏ. ೧೯: ಮಡಿಕೇರಿ ತಾಲೂಕು ನಾಪೋಕ್ಲು ಗ್ರಾಮದ ಪೈಸಾರಿ ಜಾಗದ ಸರ್ವೆ ನಂ.೨೯/೨, ೨೮/೪, ೨೬/೧ ಮತ್ತು ೨೬/೩ ರಲ್ಲಿ ‘ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ’ ನಿರ್ಮಾಣ ಮಾಡಲು ಗುರುತಿಸಿರುವ ಜಾಗದಲ್ಲಿ ಬೀಟೆ ಮತ್ತು ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸುವ ಬಗ್ಗೆ ಪ್ರಸ್ತಾವನೆ ಬಂದಿದೆ.

ಈ ಬಗ್ಗೆ ವಲಯ ಅರಣ್ಯಾಧಿಕಾರಿ, ಭಾಗಮಂಡಲ ವಲಯ, ಭಾಗಮಂಡಲ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ತಾಂತ್ರಿಕ ಸಹಾಯಕರು, ಮಡಿಕೇರಿ ವಿಭಾಗ, ಮಡಿಕೇರಿ ಅವರು ಈ ಜಾಗವನ್ನು ಪರಿಶೀಲಿಸಿದ್ದು, ಒಟ್ಟು ವಿವಿಧ ಜಾತಿಯ ೧೬೭ ಮರಗಳನ್ನು ತೆರವುಗೊಳಿಸುವ ಅವಶ್ಯಕತೆ ಇದ್ದು, ೭ ಬೀಟೆ ಮತ್ತು ೧೧೭ ಅಕೇಶಿಯಾ ಮ್ಯಾಂಜಿಯA, ೩ ಅಕೇಶಿಯಾ ಅರಿಕುಲಿಪಾರ್ಮಿಸ್, ೫ ತೇಗ, ೨ ಹಲಸು, ೧ ಹೆಬ್ಬಲಸು, ೨೫ ಕಾಡುಜಾತಿ, ೫ ಗೋಳಿ, ೧ ಹುಣಸೆ, ೧ ಕಕ್ಕೆ ಮರಗಳು ಹೀಗೆ ಒಟ್ಟು ೧೬೭ ಹಸಿನಿಂತ ಮರಗಳಿರುವುದಾಗಿ ವರದಿ ನೀಡಿರುತ್ತಾರೆ.

(ಮೊದಲ ಪುಟದಿಂದ) ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ (ಕೆಪಿಟಿ ಆಕ್ಟ್ ಸೆಕ್ಷನ್-೮(೭) ನಿಯಮದಡಿ ೫೦ಕ್ಕೂ ಹೆಚ್ಚಿನ ಮರಗಳನ್ನು ಯಾವುದೇ ಸಾರ್ವಜನಿಕ ಉದ್ದೇಶಕ್ಕೆ ತೆರವುಗೊಳಿಸುವುದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯ ಪಡೆಯುವುದು ಅಗತ್ಯವಾಗಿದೆ.

ಆದ್ದರಿಂದ ತಾ. ೨೩ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಮಡಿಕೇರಿ ಅರಣ್ಯ ಭವನ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಆಸಕ್ತ ಸಾರ್ವಜನಿಕರು ಪಾಲ್ಗೊಂಡು ಮರ ತೆರವಿನ ಕಾಮಗಾರಿ ಮುಂದುವರೆಸುವ ಬಗ್ಗೆ ತಮ್ಮ ಅಭಿಪ್ರಾಯವನ್ನು ನೀಡಬಹುದು ಅಥವಾ ಲಿಖಿತ ರೂಪದಲ್ಲಿಯೂ ಅಭಿಪ್ರಾಯವನ್ನು ತಾ. ೨೩ ರೊಳಗೆ ಕಚೇರಿಗೆ ನೀಡಬಹುದು. ಹೆಚ್ಚಿನ ಮಾಹಿತಿಗೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರ ಕಚೇರಿಯಲ್ಲಿ ಪಡೆಯಬಹುದು ಅಥವಾ ದೂ. ೦೮೨೭೨-೨೨೮೩೦೫ ಕರೆ ಮಾಡಿ ಈ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.