ಕೂಡಿಗೆ, ಏ. ೧೯: ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿರುವ ಶಾಲಾಸಿದ್ಧಿ ಕಾರ್ಯಕ್ರಮವು ಶಾಲೆಗಳ ಸಂಪೂರ್ಣ ಮತ್ತು ಸಮಗ್ರ ಸುಧಾರಣೆಗೆ ಸಹಕಾರಿ ಯಾಗಿದೆ ಎಂದು ಸೋಮವಾರಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ತು ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಕೂಡಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೦-೨೧ನೇ ಸಾಲಿನ ‘ಶಾಲಾಸಿದ್ಧಿ’ ಕಾರ್ಯಕ್ರಮದ ಅನುಷ್ಠಾನಗೊಳಿಸುವ ಕುರಿತು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಸಂಪನ್ಮೂಲ ಶಿಕ್ಷಕರಿಗೆ ಏರ್ಪಡಿಸ ಲಾಗಿದ್ದ ಕ್ಲಸ್ಟರ್ ಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ‘ಶಾಲಾಸಿದ್ಧಿ’ ಅನುಷ್ಠಾನಗೊಳಿಸುವ ಮಾಹಿತಿ ನೀಡಿದ ಅವರು, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಮುದಾಯದ ಸಹಭಾಗಿತ್ವ ಅವಶ್ಯಕ ಎಂದರು.

ಶಾಲಾಸಿದ್ಧಿ ಕಾರ್ಯಕ್ರಮವು ಸರ್ಕಾರಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳ ಕಲಿಕೆ, ಶೈಕ್ಷಣಿಕ ಪ್ರಗತಿ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದ್ದು, ಇವುಗಳಿಗೆ ಅಗತ್ಯ ಮೂಲಸೌಕರ್ಯ ಗಳನ್ನು ಒದಗಿಸಲು ಸಹಕಾರಿಯಾಗಿದೆ ಎಂದರು.

ಕೆ.ಎಸ್.ಕ್ಯೂ.ಎ.ಎ.ಸಿ. ವತಿಯಿಂದ ೨೦೨೦-೨೧ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಶಾಲಾಸಿದ್ಧಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸ ಲಾಗುತ್ತಿದೆ ಎಂದು ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪಾಂಡು ಹೇಳಿದರು.

ತರಬೇತಿ ಕಾರ್ಯಕ್ರಮ ಉದ್ಘಾಟಿಸಿದ ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪರಮೇಶ್ವರಪ್ಪ ಮಾತನಾಡಿ, ಈ ಕಾರ್ಯಕ್ರಮವು ಸ್ಥಳೀಯ ಸಮುದಾಯದ ಸಮನ್ವಯತೆ ಹಾಗೂ ಸಹಭಾಗಿತ್ವದಲ್ಲಿ ವಿದ್ಯಾರ್ಥಿ ಗಳ ಕಲಿಕಾ ಪ್ರಗತಿ ಹಾಗೂ ಶಾಲಾ-ಕಾಲೇಜಿನ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾಗಿದೆ ಎಂದರು.

ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸಿ.ಆರ್. ಶಶಿಧರ್ ಮಾತನಾಡಿ, ಎಲ್ಲಾ ಶಾಲೆಗಳು ಸ್ವ ಸುಧಾರಣೆಯಲ್ಲಿ ತೊಡಗಿಕೊಳ್ಳಲು ಧನಾತ್ಮಕ ದೃಷ್ಠಿಕೋನಗಳನ್ನು ಹೊಂದಿದ್ದು, ಮೌಲ್ಯಮಾಪನವು ಒಂದು ಸಾಧನವಾಗಿ ಶಾಲೆಯ ಸುಧಾರಣೆಯ ಗುರಿ ಹೊಂದಿದೆ ಎಂದರು.

ತರಬೇತಿಯಲ್ಲಿ ಶಾಲಾಸಿದ್ಧಿ ಕಾರ್ಯಕ್ರಮದ ಮಾಹಿತಿ ನೀಡಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಎಸ್.ಎನ್. ಲೋಕೇಶ್, ಶಾಲಾಸಿದ್ಧಿ ಕಾರ್ಯ ಕ್ರಮವು ಶಾಲಾ-ಕಾಲೇಜಿನ ಸಾಮರ್ಥ್ಯಗಳು ಮತ್ತು ಅಭಿವೃದ್ಧಿ ಯಾಗಬೇಕಾದ ಕ್ಷೇತ್ರಗಳನ್ನು ಗುರುತಿಸಿ ಯೋಜಿತ ಮಾರ್ಗದರ್ಶನದ ಮೂಲಕ ಶಾಲಾ-ಕಾಲೇಜನ್ನು ಸಬಲೀಕರಣಗೊಳಿಸುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ಶಿಕ್ಷಕರಾದ ಎಸ್.ವಿ. ಸಂತೋಷ್ ಕುಮಾರ್, ಎಚ್.ಎನ್. ಗಿರೀಶ್, ಕೆ. ಶಾಂತಕುಮಾರ್ ಶಾಲಾಸಿದ್ಧಿ ಕಾರ್ಯಕ್ರಮದ ಅನುಷ್ಠಾನದ ಕುರಿತು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾ ಯರ ಸಂಘದ ಅಧ್ಯಕ್ಷ ಎಚ್.ಕೆ. ಕುಮಾರ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವ ಎಸ್. ಪಲ್ಲೇದ್, ಕೂಡಿಗೆ ಡಯಟ್ ಉಪನ್ಯಾಸಕರಾದ ಸಿದ್ದೇಶಿ, ಸಿದ್ದೇಶ್ ಕುಮಾರ್, ಕುಮಾರಸ್ವಾಮಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ. ಪ್ರೇಮಕುಮಾರ್, ಕಣಿವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಂ. ಗಣೇಶ್, ಇಸಿಓ ಎಸ್.ಅರ್. ಶಿವಲಿಂಗ, ಸಿ.ಆರ್.ಪಿ. ಗಳಾದ ಎಸ್.ವಿ. ಸಂತೋಷ್ ಕುಮಾರ್, ಮುಬೀನಾ ಕೌಸರ್, ಎಚ್.ಎನ್. ಗಿರೀಶ್, ಸಿ.ಎಂ. ಸೀಮಾ, ಶಾಲೆಯ ಮುಖ್ಯ ಶಿಕ್ಷಕಿ ಸಣ್ಣಕ್ಕ ಸೇರಿದಂತೆ ಕುಶಾಲನಗರ, ಕೂಡಿಗೆ, ಹೆಬ್ಬಾಲೆ ಹಾಗೂ ನಂಜರಾಯಪಟ್ಟಣ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಸಂಪನ್ಮೂಲ ಶಿಕ್ಷಕರು ಪಾಲ್ಗೊಂಡಿದ್ದರು.