ಸೋಮವಾರಪೇಟೆ,ಏ.೧೮: ಪ್ರವಾಸಿಗರ ನೆಚ್ಚಿನ ತಾಣವಾಗಿರುವ ತಾಲೂಕಿನ ಮಲ್ಲಳ್ಳಿ ಜಲಪಾತದಲ್ಲಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ ನೀರಿಗಿಳಿದ ಈರ್ವರು ದುರ್ಮರಣಕ್ಕೀಡಾಗಿರುವ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ.

ತಾಲೂಕಿನ ಸುಂಟಿಕೊಪ್ಪದ ಕೆಇಬಿ ಬಳಿಯ ರಾಮು ಬಡಾವಣೆಯ ನಿವಾಸಿಗಳಾದ ಪೆಟ್ಟಿರಾಮನ್ ಅವರ ಪುತ್ರ ಶಶಿಕುಮಾರ್ (೩೪) ಹಾಗೂ ಉಣ್ಣಿ ಹಾಗೂ ಮಾರಿ ಅವರ ಪುತ್ರಿ ದಿವ್ಯ (೨೦) ಮೃತರು. ಇಂದು ಬೆಳಿಗ್ಗೆ ಕಾರಿನಲ್ಲಿ ಒಂದೇ ಕುಟುಂಬದ ೬ ಮಂದಿಯ ತಂಡ ಮಲ್ಲಳ್ಳಿ ಜಲಪಾತಕ್ಕೆ ಆಗಮಿಸಿದ್ದು, ಜಲಪಾತದ ಮೇಲ್ಭಾಗ ಕಾರನ್ನು ನಿಲುಗಡೆಗೊಳಿಸಿ ತಳಭಾಗಕ್ಕೆ ಇಳಿದಿದ್ದಾರೆ.

ಜಲಪಾತದ ಒಳಗೆ ಇಳಿಯ ದಂತೆ ಎಚ್ಚರಿಕೆಯ ಫಲಕ, ಕಬ್ಬಿಣದ ಮೆಸ್, ಗೇಟ್ ಅಳವಡಿಸಿದ್ದರೂ ಸಹ ಇದನ್ನು ಲೆಕ್ಕಿಸದೇ ನೀರು ಧುಮ್ಮಿಕ್ಕುವ ಸ್ಥಳಕ್ಕೆ ಆರು ಮಂದಿಯೂ ತೆರಳಿದ್ದಾರೆ. ಜಲಪಾತದ ತಳಭಾಗದಲ್ಲಿ ಇತರರು ಮೊಬೈಲ್‌ನಲ್ಲಿ ಮುಳುಗಿದ್ದ ಸಂದರ್ಭ ದಿವ್ಯ ಅವರು ನೀರಿಗೆ ಕಾಲು ಹಾಕಲು ಮುಂದಾಗಿದ್ದಾರೆ. ಕಲ್ಲಿನ ಮೇಲೆ ಪಾಚಿ ಕಟ್ಟಿದ್ದರಿಂದ ಜಾರಿ ಕ್ಷಣ ಮಾತ್ರದಲ್ಲಿ ಗುಂಡಿಗೆ ಬಿದ್ದಿದ್ದಾರೆ. ಇದನ್ನು ಗಮನಿಸಿದ ಶಶಿಕುಮಾರ್ ತನಗೆ ಈಜಲು ಬಾರದಿದ್ದರೂ ಸಹ ದಿವ್ಯಾಳ ಸಹಾಯಕ್ಕೆ ನೀರಿಗಿಳಿದಿ ದ್ದರಿಂದ ಆತನೂ ಜಲಪಾತದಲ್ಲಿ ಮುಳುಗಿದ್ದಾನೆ.

ಈ ಸಂದರ್ಭ ಸ್ಥಳದಲ್ಲಿದ್ದ ಈರ್ವರು ಯುವಕರು ತಮ್ಮ ಶರ್ಟ್ಗಳನ್ನು ಬಿಚ್ಚಿ ನೀರಿನಲ್ಲಿ ಮುಳುಗುತ್ತಿದ್ದ ಶಶಿಕುಮಾರ್‌ಗೆ ನೀಡಿದ್ದಾರೆ. ಶರ್ಟ್ನ ಒಂದು ತುದಿಯನ್ನು ಹಿಡಿದುಕೊಂಡ ಶಶಿಕುಮಾರ್ ನೀರಿನ ಸೆಳೆತಕ್ಕೆ ಸಿಲುಕಿ ಕಣ್ಮರೆಯಾಗಿದ್ದಾರೆ.

ತಮ್ಮ ಜೊತೆಯಲ್ಲೇ ಬಂದ ಈರ್ವರು ಸಂಬAಧಿಕರು ಕಣ್ಣೆದುರೇ ಜಲಪಾತದಲ್ಲಿ ಮುಳುಗಿ ಕಣ್ಮರೆಯಾದ ಸನ್ನಿವೇಶವನ್ನು ಕಂಡ ಇತರರು ಜಲಪಾತದ ಬಳಿಯಲ್ಲಿ ರೋಧಿಸುತ್ತಿದ್ದರು. ಘಟನೆಯ ಬಗ್ಗೆ ಸ್ಥಳೀಯ ಅಂಗಡಿ ಮಾಲೀಕರು ತಕ್ಷಣ ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ ಮೇರೆ, ಪೊಲೀಸರು ಸ್ಥಳಕ್ಕೆ ತೆರಳಿದ್ದು, ಪೊಲೀಸರ ಸಮ್ಮುಖದಲ್ಲಿ ಮೃತದೇಹಗಳನ್ನು ಹೊರತೆಗೆಯ ಲಾಯಿತು.