ಆಲೂರುಸಿದ್ದಾಪುರ, ಏ. ೧೮: ರೋಟರಿ ಸಂಸ್ಥೆಯಲ್ಲಿ ತೊಡಗಿಸಿ ಕೊಳ್ಳುವ ಸದಸ್ಯರು ಸಾಮಾಜಿಕ ಜವಾಬ್ದಾರಿ, ನಾಯಕತ್ವದ ಗುಣ ಹಾಗೂ ವ್ಯಕ್ತಿತ್ವ ವಿಕಾಸನಗೊಳ್ಳುವುದರ ಜೊತೆಯಲ್ಲಿ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ ಎಂದು ರೋಟರಿ ಕ್ಲಬ್ ಕೊಡಗು ಜಿಲ್ಲಾ ಗೌರ‍್ನರ್ ರಂಗನಾಥ್ ಭಟ್ ಅಭಿಪ್ರಾಯ ಪಟ್ಟರು. ಅವರು ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಕಚೇರಿಯ ನೂತನ ಕಟ್ಟಡ ಕಾಮಗಾರಿಯ ಶಂಕುಸ್ಥಾಪನೆ ಮತ್ತು ಕ್ಲಬ್ ವತಿಯಿಂದ ಆಲೂರುಸಿದ್ದಾಪುರ ಮುಖ್ಯ ರಸ್ತೆ ಬದಿಯಲ್ಲಿ ಅಳವಡಿಸಿರುವ ಸ್ವಾಗತ ಫಲಕ ಉದ್ಘಾಟನೆ ಹಾಗೂ ಕ್ಲಬ್ ವತಿಯಿಂದ ವಿವಿಧ ಸಾಧಕರಿಗಾಗಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.-ಸಂಸ್ಥೆಯೊAದರ ಅಡಿಪಾಯ ಗಟ್ಟಿತನಗೊಂಡರೆ ಸಂಸ್ಥೆಯು ಗಟ್ಟಿತನದಿಂದ ಅಭಿವೃದ್ದಿಗೊಳ್ಳುವುದಕ್ಕೆ ರೋಟರಿ ಸಂಸ್ಥೆ ಸಾಕ್ಷಿಯಾಗಿದೆ ಎಂದರು.

ಸಾಮಾಜ ಸೇವೆ, ನಾಯಕತ್ವ ಹೊಣೆಗಾರಿಕೆ ಮುಂತಾದ ಸಾಮಾಜಿಕ ಜವಾಬ್ದಾರಿಗೆ ರೋಟರಿ ಕ್ಲಬ್ ಉತ್ತಮ ವೇದಿಕೆಯಾಗಿದೆ ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಸದಸ್ಯರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರ ಜೊತೆಯಲ್ಲಿ ಸಮಾಜದಲ್ಲಿ ಗೌರವವನ್ನು ಸಂಪಾದಿಸುವAತೆ ಕರೆ ನೀಡಿದರು.

ಸಹಾಯಕ ಗೌರ‍್ನರ್ ಪಿ.ಕೆ. ರವಿ ಮಾತನಾಡಿ, ಕೋವಿಡ್ ನಡುವೆ ರೋಟರಿ ಕ್ಲಬ್ ಉತ್ತಮ ಸಮಾಜ ಸೇವೆ ನೀಡುತ್ತಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕರು ರೋಟರಿ ಕ್ಲಬ್ ಬೆಳವಣಿಗೆಗೆ ಸಹಕರಿಸ ಬೇಕೆಂದರು. ಆಲೂರುಸಿದ್ದಾಪುರ ರೋಟರಿ ಕ್ಲಬ್ ೨ ವರ್ಷದ ಅವಧಿಯಲ್ಲಿ ಗಮನಾರ್ಹ ಸಾಧನೆ ಮಾಡಿದೆ, ಸ್ವತ ಕಚೇರಿ ನಿರ್ಮಾಣ ಮಾಡುತ್ತಿರುವುದು ಶ್ಲಾಘನಿಯ ಮತ್ತು ರೋಟರಿ ಕ್ಲಬ್ ಕಚೇರಿ ನಿರ್ಮಾಣಕ್ಕಾಗಿ ಉಚಿತವಾಗಿ ಜಾಗ ನೀಡಿರುವ ಗ್ರಾಮದ ದಾನಿ ರೋಟರಿಯನ್ ವೆಂಕಟೇಶ್ ಅವರ ಕಾರ್ಯಕ್ಕೆ ರೋಟರಿ ಕ್ಲಬ್ ಅಭಿನಂದನೆ ಸಲ್ಲಿಸುತ್ತದೆ ಎಂದರು.

ರೋಟರಿ ವಲಯ ಸೇನಾನಿ ಕೆ.ಎಂ. ಜೇಕಬ್, ರೋಟರಿ ಮಲ್ಲೇಶ್ವರ ಕ್ಲಬ್ ಅಧ್ಯಕ್ಷ ಎ.ಎಸ್.ರಾಮಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಥಮ ಮಹಿಳಾ ರೋಟರಿಯನ್ ರಜನಿ ರಂಗನ್ನಾಥ್, ರೋಟರಿ ಮಲ್ಲೇಶ್ವರ ಕ್ಲಬ್ ಕಾರ್ಯದರ್ಶಿ ಎ.ಎನ್. ತ್ಯಾಗರಾಜು, ನಿಕಟ ಪೂರ್ವ ಅಧ್ಯಕ್ಷ ಎಚ್.ಎ. ತಮ್ಮಯ್ಯ, ಕಟ್ಟಡ ನಿರ್ಮಾಣ ಜಾಗದ ದಾನಿ ಜೆ.ಟಿ. ವೆಂಕಟೇಶ್, ಜಿಲ್ಲಾ ರೋಟರಿ ಪದಾಧಿಕಾರಿಗಳು, ಕುಶಾಲನಗರ, ಪಿರಿಯಾಪಟ್ಟಣದ ರೋಟರಿ ಸದಸ್ಯರು, ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ಮಹಿಳಾ ರೋಟರಿ ಸದಸ್ಯರು ಹಾಗೂ ರೋಟರಿ ಕುಟುಂಬ ಸದಸ್ಯರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಆಲೂರುಸಿದ್ದಾಪುರ ರೋಟರಿ ಮಲ್ಲೇಶ್ವರ ಕ್ಲಬ್ ವತಿಯಿಂದ ಶಿಕ್ಷಣ ಕ್ಷೇತ್ರದ ಸಾಧಕರಾದ ಚಿಣ್ಣಪ್ಪ, ಕರುಂಬಯ್ಯ, ಅರಣ್ಯ ಇಲಾಖೆಯ ಜೆ.ಟಿ. ವೆಂಕಟೇಶ್ ನೂತನ ಗ್ರಾ.ಪಂ.ಸದಸ್ಯರಾದ ಪಿ.ಎನ್. ಗಂಗಾಧರ್, ಕಿರಣ್, ಬೇಬಿ ಇವರುಗಳನ್ನು ಸನ್ಮಾನಿಸಲಾಯಿತು.