ಮಡಿಕೇರಿ, ಏ. ೧೭: ಕೆರೆಯಲ್ಲಿ ಈಜಲು ತೆರಳಿದ ಬಾಲಕ ಮುಳುಗಿ ಮೃತಪಟ್ಟ ಘಟನೆ ಕಡಗದಾಳು ಗ್ರಾಮದಲ್ಲಿ ನಡೆದಿದೆ.

ಶಿವಬಾಲನ್ ಹಾಗೂ ಆಶಾ ದಂಪತಿ ಪುತ್ರ ಸಂತೋಷ್ (೧೦) ಸಾವನ್ನಪ್ಪಿದ ಬಾಲಕ. ತಾ. ೧೭ ರಂದು ಮಧ್ಯಾಹ್ನ ೧.೩೦ ರ ವೇಳೆಗೆ ಆಟವಾಡಲೆಂದು ಸಂತೋಷ್ ಹಾಗೂ ಆತನ ಸಹೋದರ ಶ್ಯಾಂ ಸ್ನೇಹಿತರೊಂದಿಗೆ ತೆರಳಿದ್ದಾರೆ. ಕಡಗದಾಳು ಶಾಲೆಯ ಹಿಂಭಾಗದಲ್ಲಿರುವ ಮಾಳೇಟಿರ ಜಗದೀಶ್ ಎಂಬವರ ಕೆರೆಗೆ ಈಜಲು ತೆರಳಿದ ಸಂದರ್ಭ ಸುಮಾರು ೧೦ ಅಡಿ ಆಳದಲ್ಲಿ ಮುಳುಗಿ ಬಾಲಕ ಕೊನೆಯುಸಿರೆಳೆದಿದ್ದಾನೆ. ಜೊತೆಯಲ್ಲಿದ್ದ ಅಣ್ಣ ಪೋಷಕರಿಗೆ ಬಂದು ವಿಷಯ ತಿಳಿಸಿದ ನಂತರ ಗ್ರಾಮಸ್ಥರ ನೆರವಿನೊಂದಿಗೆ ಬಾಲಕನ ಮೃತದೇಹವನ್ನು ಹೊರತೆಗೆಯಲಾಯಿತು. ಈ ಸಂಬAಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.