*ಗೋಣಿಕೊಪ್ಪಲು, ಏ. ೧೬: ವಸತಿ ಭಾಗ್ಯ ಕಲ್ಪಿಸಿಕೊಡಿ ಎಂಬ ಪೌರಕಾರ್ಮಿಕರ ಹಲವು ವರ್ಷಗಳ ಹೋರಾಟದ ದ್ವನಿಗೆ ಕೊನೆಗೂ ಫಲ ದೊರೆತಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೦ನೇ ಜನ್ಮ ದಿನಾಚರಣೆ ಯಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ನೂತನ ವಸತಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಪೌರಕಾರ್ಮಿಕರಿಗೆ ಬದುಕಲು ಆಸರೆ ಕಲ್ಪಿಸಿದ್ದಾರೆ.
ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ೨೧ ಪೌರಕಾರ್ಮಿಕ ಕುಟುಂಬಗಳು ವಾಸಿಸುತ್ತಿವೆ. ಇವರಿಗೆ ವಸತಿ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿತ್ತು. ವಾಸಿಸುತ್ತಿರುವ ಸ್ಥಳ ಅನಾರೋಗ್ಯದ ವಾತಾವರಣದಿಂದ ಕೂಡಿತ್ತು. ರೋಗ ರುಜಿನಗಳು ಸದಾ ಇಲ್ಲಿನ ಜನರನ್ನು ಕಾಡುತ್ತಿತ್ತು. ಕ್ಷಯ, ಕಾಲರಾ ರೋಗಗಳು ಬಾದಿಸುತ್ತಿದ್ದವು. ಹೀಗಾಗಿ ಇವರಿಗೆ ಸೂಕ್ತ ವಸತಿ ವ್ಯವಸ್ಥೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸ್ಥಳೀಯ ದಲಿತ ನಾಯಕರು ಹಾಗೂ ಗ್ರಾ.ಪಂ. ಕೆಲವು ಸದಸ್ಯರುಗಳು ಹೋರಾಟದ ಮೂಲಕ ಪಂಚಾಯಿತಿಗೆ ಒತ್ತಡ ಹೇರಿದ್ದರು.
ಪೌರಕಾರ್ಮಿಕರ ಗಂಭೀರ ಸಮಸ್ಯೆಯನ್ನು ಮನಗಂಡು ಗೋಣಿಕೊಪ್ಪ ಪಂಚಾಯಿತಿ ೧೪ ಮತ್ತು ೧೫ನೇ ಹಣಕಾಸಿನಲ್ಲಿ ೨೦ ಲಕ್ಷಗಳ ಅನುದಾನವನ್ನು ಬಳಸಿ ಗೋಣಿ ಕೊಪ್ಪಲು ಮಾಂಸ ಮಾರುಕಟ್ಟೆಯ ಮುಂಭಾಗದಲ್ಲಿ ಕಾಯ್ದಿರಿಸಿದ ಸ್ಥಳದಲ್ಲಿ ೧೦ ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಡಲು ಮುಂದಾಗಿದೆ.
ಶಾಸಕ ಕೆ.ಜಿ. ಬೋಪಯ್ಯ ಅವರು ಮನೆ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಸಿ.ಕೆ. ಬೋಪಣ್ಣ, ಮೂಕಂಡ ವಿಜು ಸುಬ್ರಮಣಿ, ತಾಲೂಕು ಬಗರ್ಹುಕುಂ ಸಾಗುವಳಿ ಸಕ್ರಮೀಕರಣ ಅಧ್ಯಕ್ಷ ಕಾಡ್ಯಮಾಡ ಗಿರೀಶ್ಗಣಪತಿ, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ರಾಮಕೃಷ್ಣ, ಸುರೇಶ್ರೈ, ರತಿಅಚ್ಚಪ್ಪ, ಜೆ.ಕೆ. ಸೋಮಣ್ಣ, ಮುರುಘ, ರಾಜೇಶ್, ವಿವೇಕ್ರಾಯ್ಕರ್, ಗೀತಾ, ಚೈತ್ರಚೇತನ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ ಹಾಗೂ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ ಹಾಗೂ ಪೌರಕಾರ್ಮಿಕರ ಜತೆಗೂಡಿ ವಸತಿ ನಿರ್ಮಾಣಕ್ಕೆ ಭೂಮಿಪೂಜೆ ನಡೆಸಿದ್ದು ಪೌರಕಾರ್ಮಿಕರ ಕನಸು ನನಸಾಗುವ ಸಮಯ ಕೂಡಿಬಂದಿದೆ.
-ಎನ್.ಎನ್. ದಿನೇಶ್