ಸಿ.ಎಂ.ಗೆ ಕೊರೊನಾ ಪಾಸಿಟಿವ್
ಬೆಂಗಳೂರು, ಏ. ೧೬: ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಕಳೆದೆರಡು ದಿನಗಳಿಂದ ಜ್ವರ, ಸುಸ್ತಿನಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಿ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಮಧ್ಯಾಹ್ನ ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ತಪಾಸಣೆಗೆ ಹಾಜರಾಗಿದ್ದರು. ಅಲ್ಲಿ ನಿಗದಿಯಂತೆ ಅವರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ಪಾಸಿಟಿವ್ ಬಂದಿದ್ದು ಇದೀಗ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಬರುತ್ತಿರುವುದು ಇದು ಎರಡನೇ ಸಲ. ಕಳೆದ ವರ್ಷ ಕೂಡ ಕೊರೊನಾ ಬಂದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.
ನೀರವ್ ಮೋದಿ ಗಡಿಪಾರಿಗೆ ಬ್ರಿಟನ್ ಗೃಹ ಸಚಿವಾಲಯ ಅಸ್ತು
ಲಂಡನ್, ಏ. ೧೬: ಭಾರತಕ್ಕೆ ಬೇಕಾಗಿರುವ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣದ ಪ್ರಮುಖ ಆರೋಪಿ, ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಗಡಿಪಾರು ಮಾಡಲು ಶುಕ್ರವಾರ ಬ್ರಿಟನ್ ಗೃಹ ಸಚಿವಾಲಯ ಅಂಕಿತ ಹಾಕಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ ಸಾವಿರಾರು ಕೋಟಿ ರೂಪಾಯಿ ವಂಚಿಸಿ ಲಂಡನ್‌ನಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಗಡಿಪಾರು ಆದೇಶಕ್ಕೆ ಬ್ರಿಟನ್ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರು ಸಹಿ ಹಾಕಿದ್ದಾರೆ. ಕಳೆದ ಫೆಬ್ರವರಿ ೨೫ ರಂದು ಲಂಡನ್‌ನ ವೆಸ್ಟ್ ಮಿನಿಸ್ಟರ್ ನ್ಯಾಯಾಲಯ ಉದ್ಯಮಿ ನೀರವ್ ಮೋದಿ ಗಡಿಪಾರಿಗೆ ಆದೇಶ ನೀಡಿತ್ತು.
ಚಿತ್ರನಟ ವಿವೇಕ್‌ಗೆ ಹೃದಯಾಘಾತ
ಚೆನ್ನೆöÊ, ಏ. ೧೬: ಹೃದಯಾಘಾತದಿಂದ ಬಳಲುತ್ತಿದ್ದ ನಟ ವಿವೇಕ್ ಅವರ ಎಡ ಅಪಧಮನಿಯಲ್ಲಿ ಶೇ. ೧೦೦ ರಷ್ಟು ರಕ್ತ ಹೆಪ್ಪುಗಟ್ಟಿದ್ದು, ಇದಕ್ಕೂ ಕೋವಿಡ್ ವ್ಯಾಕ್ಸಿನೇಷನ್‌ಗೆ ಸಂಬAಧ ಇಲ್ಲದಿರಬಹುದೆಂದು ಸಿಐಎಂಎಸ್ ಆಸ್ಪತ್ರೆ ಉಪಾಧ್ಯಕ್ಷ ಡಾ. ರಾಜು ಶಿವಸಾಮಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಶಿವಸಾಮಿ, ೫೯ ವರ್ಷದ ನಟ "ವೆಂಟ್ರಿಕ್ಯುಲರ್ ಫೈಬ್ರಿಲೇಷನ್" ಎಂಬ ಪ್ರತ್ಯೇಕ ಹೃದಯ ಸಂಬAಧಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದರ ಪರಿಣಾಮವಾಗಿ ಮೆದುಳಿಗೆ ರಕ್ತ ಪೂರೈಕೆ ಕಡಿಮೆಯಾಗಿರುವುದಾಗಿ ಹೇಳಿದರು. ಮೊದಲ ಬಾರಿಗೆ ವಿವೇಕ್ ಅವರಿಗೆ ತೀವ್ರ ಹೃದಯಾಘಾತವಾಗಿದೆ. ಅಂಜಿಯೊಗ್ರಾಮ್ ನಂತರ ಅಂಜಿಯೊಪ್ಲಾಸ್ಟಿ ಮಾಡಿ ಹೃದಯಕ್ಕೆ ಸ್ಟಂಟ್ ಅಳವಡಿಸಲಾಗಿದೆ. ಪ್ರಸ್ತುತ ಅವರ ಸ್ಥಿತಿ ಗಂಭೀರವಾಗಿದೆ.
ಚೆಕ್‌ಬೌನ್ಸ್ ಕೇಸುಗಳ ಶೀಘ್ರ ವಿಲೇವಾರಿಗೆ ಸುಪ್ರೀಂ ಆದೇಶ
ನವದೆಹಲಿ, ಏ. ೧೬: ಚೆಕ್‌ಬೌನ್ಸ್ ಕೇಸುಗಳ ಶೀಘ್ರ ವಿಲೇವಾರಿಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ಒಬ್ಬ ವ್ಯಕ್ತಿಯ ವಿರುದ್ಧ ಒಂದು ವರ್ಷದೊಳಗೆ ದಾಖಲಾಗುವ ಪ್ರಕರಣಗಳಲ್ಲಿ ವಿಚಾರಣೆಗಳನ್ನು ಒಟ್ಟುಗೂಡಿಸಿ ವಿಚಾರಣೆಗಳ ಶೀಘ್ರ ವಿಲೇವಾರಿ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸಂಬAಧ ಎಲ್ಲಾ ಹೈಕೋರ್ಟ್ಗಳಿಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ಚೆಕ್ ಬೌನ್ಸ್ ಕೇಸುಗಳನ್ನು ನಿಭಾಯಿಸುವಂತೆ ವಿಚಾರಣಾಧೀನ ನ್ಯಾಯಾಲಯಗಳಿಗೆ ಮಾರ್ಗಸೂಚಿ ಹೊರಡಿಸಬೇಕೆಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಚೆಕ್‌ಬೌನ್ಸ್ ಕೇಸುಗಳಲ್ಲಿ ಸಾಕ್ಷಿಗಳಿಗೆ ಅಫಿಡವಿಟ್ಟು ಸಲ್ಲಿಸಬಹುದು, ಸಾಕ್ಷಿಗಳನ್ನು ಭೌತಿಕವಾಗಿ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದೆ.
ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ನಡೆಯಲಿವೆ : ಸುರೇಶ್‌ಕುಮಾರ್
ಹನೂರು, ಏ. ೧೬: ಸದ್ಯದ ಪರಿಸ್ಥಿತಿಯನ್ನು ನೋಡಿ ಹೇಳುವುದಾದರೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆ ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯ ವಾಗಿ ಏರಿಕೆಯಾಗುತ್ತಿದ್ದು, ಇದೇ ಕಾರಣಕ್ಕೆ ಇತ್ತೀಚೆಗಷ್ಟೇ ಕೇಂದ್ರ ಶಿಕ್ಷಣ ಇಲಾಖೆ ಸಿಬಿಎಸ್‌ಇ ಪರೀಕ್ಷೆಗಳನ್ನು ರದ್ದು ಮಾಡಿತ್ತು. ಇದೇ ಕಾರಣಕ್ಕೆ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳು ರದ್ದಾಗುವ ಕುರಿತು ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು, ಸದ್ಯದ ಪರಿಸ್ಥಿತಿಯನ್ನು ನೋಡಿ ಹೇಳುವುದಾದರೆ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಪರೀಕ್ಷೆ ನಡೆಯಲಿವೆ ಎಂದು ಹೇಳಿದ್ದಾರೆ.
ಪ್ರಕಾಶ್ ಜಾವಡೇಕರ್‌ಗೆ ಕೊರೊನಾ ಪಾಸಿಟಿವ್
ನವದೆಹಲಿ, ಏ. ೧೬: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಕೋವಿಡ್-೧೯ ಪಾಸಿಟಿವ್ ದೃಢಪಟ್ಟಿದೆ. ಈ ಕುರಿತು ಟ್ವೀಟ್ ಮೂಲಕ ಮಾಹಿತಿ ನೀಡಿರುವ ಪ್ರಕಾಶ್ ಜಾವಡೇಕರ್ ಅವರು, ತಮ್ಮ ಜೊತೆಗೆ ಸಂಪರ್ಕಕ್ಕೆ ಬಂದವರು ಪರೀಕ್ಷೆಗೊಳಪಡುವಂತೆ ಮನವಿ ಮಾಡಿದ್ದಾರೆ.
ಸೋಂಕು ತಡೆಗೆ ಎಲ್ಲಾ ಕ್ರಮಗಳ ತುರ್ತು ಅಳವಡಿಕೆ ಅತ್ಯಗತ್ಯ - ಡಬ್ಲುö್ಯಹೆಚ್‌ಒ
ನವದೆಹಲಿ, ಏ. ೧೬: ಆಗ್ನೇಯ ಏಷ್ಯಾ ಪ್ರದೇಶದ ದೇಶಗಳಲ್ಲಿ ಕೋವಿಡ್ -೧೯ ಪ್ರಕರಣಗಳು ತೀವ್ರವಾಗಿ ಏರುತ್ತಿರುವುದರಿಂದ, ಮತ್ತಷ್ಟು ಸೋಂಕುಗಳನ್ನು ತಡೆಗಟ್ಟಲು ಮತ್ತು ಜೀವಗಳನ್ನು ಉಳಿಸಲು ಎಲ್ಲಾ ಸಾಧನಗಳನ್ನು ಬಳಸಿ ಕೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಮನವಿ ಮಾಡಿದೆ. ಡಬ್ಲ್ಯುಹೆಚ್‌ಒ ಆಗ್ನೇಯ ಏಷ್ಯಾ ಪ್ರದೇಶದ ಪ್ರಾದೇಶಿಕ ನಿರ್ದೇಶಕ ಡಾ. ಪೂನಂ ಖೇತ್ರಪಾಲ್ ಸಿಂಗ್, ಕಳೆದ ಹಲವಾರು ವಾರಗಳಿಂದ ಪ್ರಕರಣಗಳು ಹೆಚ್ಚುತ್ತಿವೆ. ಹೊಸ ಪರಿವರ್ತನೆಯ ಸಾಂಕ್ರಾಮಿಕ ಆತಂಕಕಾರಿಯಾಗಿದೆ. ಇದನ್ನು ತಡೆಯಲು ಮೂಲಭೂತ ಸಾರ್ವಜನಿಕ ಆರೋಗ್ಯ ಕ್ರಮಗಳನ್ನು ಬಲಪಡಿಸುವ ಅಗತ್ಯವಿದೆ. ನಮ್ಮಲ್ಲಿರುವ ಎಲ್ಲಾ ಪರಿಕರಗಳನ್ನು ನಾವು ಅನ್ವಯಿಸಬೇಕಾಗಿದೆ ಎಂದಿದ್ದಾರೆ. ಕಣ್ಗಾವಲು, ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ, ಪ್ರತ್ಯೇಕತೆ, ಕ್ಯಾರೆಂಟೈನ್ ಮತ್ತು ಆರೈಕೆ - ಇವೆಲ್ಲವೂ ಸೋಂಕು ಹರಡುವಿಕೆ ತಡೆಯಲು ಹಾಗೂ ಜೀವಗಳನ್ನು ಉಳಿಸಲು ಕೆಲಸ ಮಾಡುತ್ತವೆ ಮತ್ತು ಲಸಿಕೆ ವಿತರಣೆಗೆ ಪ್ರತ್ಯೇಕ ವಿಧಾನ ಹುಡುಕಲು ಕೂಡ ಸಹಾಯ ಮಾಡುತ್ತದೆ ಎಂದು ಅಭಿ ಪ್ರಾಯಪಟ್ಟಿದ್ದಾರೆ. ಮಾಸ್ಕ್ ಧರಿಸುವಿಕೆ, ಕೈಯಲ್ಲಿ ನೈರ್ಮಲ್ಯ, ಸಾಮಾಜಿಕ ದೂರವನ್ನು ಜನರು ನಿರಂತರವಾಗಿ ಪಾಲಿಸಬೇಕು ಮತ್ತು ಲಸಿಕೆ ಪಡೆದವರು ಕೂಡ ಇವುಗಳನ್ನು ಮರೆಯಬಾರದು ಎಂದಿದ್ದಾರೆ. ಪ್ರಸ್ತುತ ಪ್ರಕರಣಗಳ ಉಲ್ಬಣದಲ್ಲಿ ವೈರಸ್ ರೂಪಾಂತರಗಳ ಪಾತ್ರದ ಬಗ್ಗೆ ಮಾತನಾಡಿದ ಡಾ. ಖೇತ್ರಪಾಲ್ ಸಿಂಗ್, ಕೋವಿಡ್-೧೯ ಏಕಾಏಕಿ ಪ್ರಾರಂಭದಿAದಲೂ ಡಬ್ಲ್ಯುಹೆಚ್‌ಒ ಜಾಗತಿಕವಾಗಿ ರೂಪಾಂತರಗಳನ್ನು ಪತ್ತೆಹಚ್ಚುತ್ತಿದೆ. ರೂಪಾಂತರಗಳ ಸಂಭವಿಸುವಿಕೆಯ ಮಾಹಿತಿಯು ಇನ್ನೂ ವ್ಯವಸ್ಥಿತ ಮತ್ತು ಸಾರ್ವತ್ರಿಕವಾಗಿಲ್ಲ. ಈ ನಿಟ್ಟಿನಲ್ಲಿ ಡಬ್ಲುö್ಯಹೆಚ್‌ಒ ಇತರ ದೇಶಗಳೊಂದಿಗೆ ಕೆಲಸ ಮಾಡುತ್ತಿದೆ ಎಂದರು.