ಮಡಿಕೇರಿ, ಏ. ೧೫: ರಾಜ್ಯದಾದ್ಯಂತ ಪಸರಿಸಿರುವ ಜಾನಪದ ಕ್ರೀಡೆಯಾಗಿರುವ ಲಗೋರಿ ಆಟವನ್ನು ಸಂರಕ್ಷಿಸಿ, ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ದೈಹಿಕ ಶಿಕ್ಷಣ ಶಿಕ್ಷಕರು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು, ಆಸಕ್ತ ಕ್ರೀಡಾಭಿಮಾನಿಗಳು, ಕ್ರೀಡಾಪಟುಗಳು ಉತ್ಸಾಹ ತೋರಿ ಯುವ ಸಮುದಾಯಕ್ಕೆ ಈ ಕ್ರೀಡೆ ಉಳಿಸಿ ಬೆಳೆಸಲು ಸಹಕಾರಿ ಆಗಬೇಕು ಎಂದು ರಾಜ್ಯ ಲಗೋರಿ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರಮೇಲು ಕೋರಿದ್ದಾರೆ.

ಕೊಡಗು ಜಿಲ್ಲಾ ಮಟ್ಟದ ಲಗೋರಿ ಅಸೋಸಿಯೇಷನ್ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಮಡಿಕೇರಿ ತಾಲೂಕಿನ ಸ.ಮಾ. ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆಯನ್ನು ಕರೆಯಲಾಗಿತ್ತು.

ಈ ಸಭೆಯನ್ನುದ್ದೇಶಿಸಿ ಮಾತನಾಡಿದ ದೊಡ್ಡಣ್ಣ ಬರಮೇಲು, ಮುಂದಿನ ದಿನಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಲಗೋರಿ ಆಟವನ್ನು ಅಸ್ತಿತ್ವಕ್ಕೆ ಬರುವುದಕ್ಕೆ ಕ್ರೀಡಾಭಿಮಾನಿಗಳ ಸಹಕಾರ ಅಗತ್ಯ ಎಂದರು,

ರಾಜ್ಯ ಲಗೋರಿ ಅಸೋಸಿಯೇಷನ್ ಕಾರ್ಯದರ್ಶಿ ಹರೀಶ್ ರೈ ಮಾತನಾಡಿ, ಕೊಡಗು ಜಿಲ್ಲೆಯ ಎಲ್ಲಾ ಆಸಕ್ತ ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘಟನಾ ಪೂರ್ವಕವಾಗಿ ತೊಡಗಿಸಿಕೊಂಡು ಲಗೋರಿ ಕ್ರೀಡೆಯ ಸಂರಕ್ಷಣೆಗೆ ನಿಟ್ಟಿನಲ್ಲಿ ವಿವಿಧ ರೀತಿಯ ಯಶಸ್ವಿ ಕಾರ್ಯಕ್ರಮ ರೂಪಿಸಬೇಕಾಗಿದೆ ಎಂದರು.

ಮಡಿಕೇರಿ ತಾಲೂಕು ಗ್ರೇಡ್ ೧ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಡಿಕೇರಿ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಪ್ರಸಾದ್ ಕೆ, ಸಂದೇಶ್, ನೌಕರರ ಸಂಘದ ಕಾರ್ಯದರ್ಶಿ, ಕರುಂಬಯ್ಯ ಸೋಮವಾರಪೇಟೆ ತಾಲೂಕಿನ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರು, ಕೊಡಗು ಜಿಲ್ಲಾ ಕಬಡ್ಡಿ ತೀರ್ಪುಗಾರ ಸಂಘದ ಅಧ್ಯಕ್ಷ ಆನಂದ, ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಗಿರಿಧರ ಗೌಡ ಉಪಸ್ಥಿತರಿದ್ದರು.

ಪ್ರಮುಖವಾಗಿ ಕೊಡಗು ಜಿಲ್ಲೆಯಲ್ಲಿ ಲಗೋರಿ ಅಸೋಸಿ ಯೇಷನ್ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಮುಂದಿನ ರೂಪು ರೇಷೆಗಳ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಯಿತು. ಕರುಂಬಯ್ಯ ವಂದಿಸಿದರು. ಕೊಡಗು ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರು, ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.