ಅಮ್ಮತ್ತಿ, ಏ. ೧೫: ಕೊಡಗಿನಲ್ಲಿ ವನ್ಯಜೀವಿ ಮಾನವ ಸಂಘರ್ಷಕ್ಕೆ ಜಾಗೃತಿ ಮೂಡಿಸುವುದೇ ಪ್ರಥಮ ಪರಿಹಾರ ಎಂದು ಕೊಡಗು ವೆಲ್ಫೇರ್ ಫೌಂಡೇಶನ್ ಸ್ಥಾಪಕ ಮಾದಂಡ ತಿಮ್ಮಯ್ಯ ಅವರು ಅಭಿಪ್ರಾಯಪಟ್ಟರು.
ಚಾನೆಲ್ ೨೪ ಕರ್ನಾಟಕ, ವಿಜಯವಾಣಿ ದಿನಪತ್ರಿಕೆ ಹಾಗೂ ಬೆಸ್ಟೀಸ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕೊಡಗು ವೆಲ್ಫೇರ್ ಫೌಂಡೇಶನ್ ವತಿಯಿಂದ ನಡೆಸಲಾಗುತ್ತಿದ್ದ ಕೊಡಗಿನ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಪ್ರವಾಸಿಗರಿಗೆ ಹೊರನೋಟಕ್ಕೆ ನೆಚ್ಚಿನ ತಾಣವಾಗಿ ಕಾಣುವ ಕೊಡಗು ಜಿಲ್ಲೆಯಲ್ಲಿ ತಡರಾತ್ರಿಯ ಸಂಚಾರ ಬಲು ಅಪಾಯಕಾರಿ ಎಂದು ಅವರು ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಜಾಗೃತಿ ಮೂಡಿಸುವಲ್ಲಿ ಮುಂದಾಳತ್ವವನ್ನು ವಹಿಸಿ ಸಮಾಜಕ್ಕೆ ಮಾರ್ಗದರ್ಶಿ ಯಾಗಬೇಕು ಎಂದು ಅವರು ತಿಳಿಸಿದರು. ತೀರ್ಪುಗಾರರಾಗಿ ಆಗಮಿಸಿದ್ದ ವಿಜಯವಾಣಿ ಜಿಲ್ಲಾ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ ಅವರು ಮಾತನಾಡಿ ವನ್ಯಜೀವಿ ಮಾನವ ಸಂಘರ್ಷಕ್ಕಿರುವ ಪರಿಹಾರಗಳ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಇದೇ ಸಂದರ್ಭ ಮಾದಕದ್ರವ್ಯಗಳ ವಿರುದ್ಧ ವಿದ್ಯಾರ್ಥಿಗಳು ಜಾಗೃತರಾಗಬೇಕೆಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ, ಕಾವೇರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಣಯ್ಯ, ಸೋಮಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕಾವೇರಿ ಪದವಿ ಕಾಲೇಜಿನ ಶೀತಲ್ ಹಾಗೂ ದ್ವಿತೀಯ ಸ್ಥಾನವನ್ನು ಪೂವಮ್ಮ ಪಡೆದುಕೊಂಡರು.
ವಿಜೇತರಿಗೆ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಲಾಯಿತು.