*ಗೋಣಿಕೊಪ್ಪಲು, ಏ. ೧೫: ಬಾಳೆಲೆ ಮತ್ತು ಪೊನ್ನಂಪೇಟೆ ಹೋಬಳಿಯ ನಿವೇಶನ ರಹಿತರಿಗೆ ಹಕ್ಕುಪತ್ರವನ್ನು ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.
ಪೊನ್ನಂಪೇಟೆ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಕ್ಕು ಪತ್ರವನ್ನು ನೀಡಲಾಯಿತು.
ಪೊನ್ನಂಪೇಟೆ ತಾಲ್ಲೂಕಿನ ೪೩ ನಿವೇಶನ ರಹಿತ ಫಲಾನುಭವಿಗಳನ್ನು ಗುರುತಿಸಿ ಸರ್ಕಾರ ೯೦/೪ ಸಿ ಕಾಯಿದೆಯಡಿಯಲ್ಲಿ ಹಕ್ಕುಪತ್ರವನ್ನು ನೀಡುತ್ತಿದೆ. ತಮಗೆ ನೀಡಿದ ಜಾಗವನ್ನು ಮಾರಾಟ ಮಾಡಲು ಅಥವಾ ಇತರರಿಗೆ ಭೋಗ್ಯಕ್ಕೆ ನೀಡದಂತೆ ತಿಳಿಸಿದರು.
ಈಗಾಗಲೇ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಮನೆ ನಿರ್ಮಿಸಿಕೊಡಲಾಗುವುದು. ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುವವರಿಗೆ ಪಂಚಾಯಿತಿ ವತಿಯಿಂದ ಮನೆ ನಿರ್ಮಿಸಿಕೊಡಲು ಸೂಚಿಸಲಾಗುವುದು ಎಂದು ಫಲಾನುಭವಿಗಳಿಗೆ ಶಾಸಕರು ಭರವಸೆ ನೀಡಿದರು.
ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣದ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಪೊನ್ನಂಪೇಟೆ ಗ್ರಾ.ಪಂ. ಸದಸ್ಯರುಗಳಾದ ಮಚ್ಚಮಾಡ ವಿಮಲ, ಗಿರಿಜಾ ವೆಂಕಟೇಶ್, ಅಡ್ಡಂಡ ನಿಲನ್, ಶಿರಸ್ಥೆದಾರ ರಾಧಕೃಷ್ಣ, ಕಂದಾಯ ಪರಿವೀಕ್ಷಕ ಮಂಜುನಾಥ್ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು, ಫಲಾನುಭವಿಗಳು ಹಾಜರಿದ್ದರು.