ಮಡಿಕೇರಿ, ಏ. ೧೬: ಮಡಿಕೇರಿ ನಗರಸಭಾ ಚುನಾವಣೆ ಸಂಬAಧ ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಸ್‌ಡಿಪಿಐ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಕೂಡ ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.

ಈ ನಡುವೆ ಬಿಜೆಪಿಯಿಂದ ಈ ಹಿಂದೆ ಹಲವು ಬಾರಿ ಸ್ಪರ್ಧಿಸಿ ಗೆದ್ದು, ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದಂತಹ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಬಿಜೆಪಿಯ ಮೂವರು ಘಟಾನುಘಟಿಗಳು ಈ ಬಾರಿ ಟಿಕೆಟ್‌ನಿಂದ ವಂಚಿತರಾಗಿರುವುದು ಜನವಲಯದಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದ್ದು, ಚರ್ಚೆಗೂ ಗ್ರಾಸವಾಗಿದೆ.

ನಗರಸಭಾ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ, ಮಾಜಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಉಣ್ಣಿಕೃಷ್ಣ ಇವರುಗಳು ಈ ಬಾರಿ ಸ್ಪರ್ಧೆಯಿಂದ ಹೊರಗುಳಿದಿದ್ದಾರೆ. ತಾ. ೨೭ ರಂದು ನಡೆಯಲಿರುವ ಚುನಾವಣೆ ಸಂಬAಧ ಬಿಜೆಪಿಯಿಂದ ಕೆಲ ಹೊಸ ಮುಖಗಳು, ಒಂದೆರಡು ಹಳೆಯ ಮುಖಗಳಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಈ ಹಿಂದೆ ನಗರಸಭಾ ಸದಸ್ಯರುಗಳಾಗಿದ್ದ ಕೆ.ಎಸ್. ರಮೇಶ್, ಶಿವಕುಮಾರಿ, ಬಿ.ಎಂ. ರಾಜೇಶ್, ಅನಿತಾ ಪೂವಯ್ಯ, ಉಮೇಶ್ ಸುಬ್ರಮಣಿ, ಸವಿತಾ ರಾಕೇಶ್ ಇವರುಗಳಿಗೆ ಮಾತ್ರ ಈ ಬಾರಿ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ನೀಡಲಾಗಿದೆ. ಉಳಿದಂತೆ ಹೊಸ ಅಭ್ಯರ್ಥಿಗಳು ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ.

ಸಂಘ ಪರಿವಾರದ ತೀರ್ಮಾನ?

‘ಶಕ್ತಿ’ಗೆ ಬಲ್ಲ ಮೂಲಗಳಿಂದ ತಿಳಿದು ಬಂದAತೆ ಈ ಬಾರಿ ನಗರಸಭಾ ಚುನಾವಣಾ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿಟ್ಟಿನಲ್ಲಿ ಸಂಘ ಪರಿವಾರದ ಪಾತ್ರ ಪ್ರಮುಖವಾಗಿತ್ತು ಎಂದು ತಿಳಿದು ಬಂದಿದ್ದು, ಬಿಜೆಪಿ ಪಕ್ಷಕ್ಕೆ - ಹಿಂದೂ ಧರ್ಮಕ್ಕಾಗಿ ಹಲವು ವರ್ಷಗಳಿಂದ ದುಡಿದ ಕೆಲವರಿಗೆ ಈ ಬಾರಿ ಅವಕಾಶ ನೀಡಿರುವದು ಸಂಘ ಪರಿವಾರದ ಪಾತ್ರ ಇದೆ ಎಂಬುದನ್ನು ಪುಷ್ಟೀಕರಿಸಿದೆ.

ನಗರಸಭಾ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಅವರ ಅಭಿಪ್ರಾಯ ಬಯಸಿದಾಗ ಮಾತನಾಡಿದ ಅವರು, ನಾನು ಕೆಲ ವಾರ್ಡ್ಗಳಲ್ಲಿ ಟಿಕೆಟ್‌ಗಾಗಿ ಪ್ರಯತ್ನ ನಡೆಸಿದ್ದೆ. ಆದರೆ ಆ ಭಾಗಗಳಲ್ಲಿ ಬಿಜೆಪಿಯ ಸ್ಥಳೀಯರೆ ಟಿಕೆಟ್ ಆಕಾಂಕ್ಷಿಗಳಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕಾರಣ ಅವರಿಗೆ ತೊಂದರೆ ನೀಡಬಾರದೆಂಬ ಕಾರಣಕ್ಕಾಗಿ ತಟಸ್ಥ ನಿಲುವು ತಳೆದಿದ್ದೇನೆ. ಹೊರತಾಗಿ ಇದರಲ್ಲಿ ಸಂಘ ಪರಿವಾರದ ಕೈವಾಡವಿದೆ ಎಂದು ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ ಎಂದರಲ್ಲದೆ, ತಾನು ಮುಂದೆಯೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನಗರಸಭಾ ಮಾಜಿ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಪ್ರತಿಕ್ರಿಯಿಸಿ ತನಗೆ ಟಿಕೆಟ್ ಸಿಗದ ಬಗ್ಗೆ ಸ್ವಲ್ಪ ಅಸಮಾಧಾನವಿದೆ. ಆದರೆ ಪಕ್ಷ ಈ ರೀತಿ ತೀರ್ಮಾನ ಕೈಗೊಂಡಿದ್ದು, ಏಕೆ ಎನ್ನುವ ಬಗ್ಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸಂಘ ಪರಿವಾರದವರು ನನಗೂ ಆತ್ಮಿಯರೆ ಆಗಿದ್ದು, ಸಂಘವನ್ನು ಪಕ್ಷಕ್ಕೆ ಎಳೆದು ತರುವುದು ಶೋಭೆ ತರುವಂತದ್ದಲ್ಲ. ಸಂಘ ಅಂತಹ ನಿಲುವನ್ನು ತಾಳುವುದಿಲ್ಲ. ಸಂಘದ ಹೆಸರನ್ನು ಯಾರು ಉಪಯೋಗಿಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ತಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದು, ಮುಂದೆಯೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ಈ ಎಲ್ಲಾ ಬೆಳವಣಿಗೆಗಳ ಕುರಿತು ‘ಶಕ್ತಿ’ಯೊಂದಿಗೆ ಮಾತನಾಡಿದ ಉಣ್ಣಿಕೃಷ್ಣ ತಾನು ಟಿಕೆಟ್ ಆಕಾಂಕ್ಷಿಯಾಗಿದ್ದುದು ನಿಜ. ಆದರೆ ಪಕ್ಷಕ್ಕೆ ದುಡಿದ ಹಲವು ಮಂದಿ ಕೂಡ ಸ್ಪರ್ಧಿಸುವ ಬಯಕೆ ಹೊಂದಿದ್ದರಿAದ ಪಕ್ಷದ ತೀರ್ಮಾನದಂತೆ ಅವರುಗಳಿಗೆ ಟಿಕೆಟ್ ಲಭಿಸಿದೆ ಹೊರತಾಗಿ ಇದರಲ್ಲಿ ಸಂಘ ಪರಿವಾರದ ಪಾತ್ರವಿದೆ ಎಂಬ ಆರೋಪ ಸರಿಯಲ್ಲ. ಸಂಘ - ಪರಿವಾರದವರ ಬಳಿ ತಾನು ಈ ಬಗ್ಗೆ ಕೇಳಿದ್ದು, ಅವರುಗಳೂ ಕೂಡ ತಮ್ಮ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದವರು ಈ ಬಾರಿ ಕೊಂಚ ಎಡವಿದ್ದಾರೆ ಆದರೂ ಇದು ಬಿಜೆಪಿ ಪಕ್ಷದ ತೀರ್ಮಾನವಾಗಿದ್ದು, ಅದಕ್ಕೆ ತಾನು ಬದ್ಧನಾಗಿದ್ದೇನೆ. ಮುಂದೆಯೂ ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.