ಕೂಡಿಗೆ, ಏ. ೧೬: ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಮಸ್ಥರು ಒಂದೆಡೆ ಸೇರಿ ಗ್ರಾಮಗಳಲ್ಲಿ ದೇವಾಲಯಗಳನ್ನು ನಿರ್ಮಾಣ ಮಾಡುವುದರ ಮೂಲಕ ಬದುಕಿನ ಮೌಲ್ಯಗಳ ಜೊತೆಯಲ್ಲಿ ಅಧ್ಯಾತ್ಮಿಕ ಚಿಂತನೆಯನ್ನು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ; ಅದೇ ರೀತಿಯಲ್ಲಿ ಧಾರ್ಮಿಕ ಆಚರಣೆಯೂ ಮುಖ್ಯವಾಗಿರುತ್ತದೆ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತೊರೆನೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಬಸವೇಶ್ವರ ಸ್ವಾಮಿ ಶಿಲಾಮೂರ್ತಿ ಪ್ರತಿಷ್ಠಾಪನೆಯ ೪೯ನೇ ದಿನದ ಪೂಜಾ ಕಾರ್ಯಕ್ರಮದ ನಂತರದ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಬಸವಪಟ್ಟಣದ ಪೂಜ್ಯ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮಿ ಮಾತಾಡುತ್ತಾ ಪರಮಾತ್ಮ ತನ್ನ ಅವತಾರದ ಮುಖೇನ ಧರ್ಮವನ್ನು ಆಚರಿಸುವ ವಿಧಾನವನ್ನು ತಿಳಿಸಿಕೊಟ್ಟಿರುತ್ತಾನೆ. ಅವುಗಳನ್ನು ಪಾಲಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವೇಶ್ವರ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ. ಚಂದ್ರಪ್ಪ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಟಿ.ಸಿ. ಭಾಗ್ಯವಂತ, ಟಿ.ವೈ. ವಿಶ್ವೇಶ್ವರಯ್ಯ ಟಿ.ಟಿ. ರವಿಕುಮಾರ್ ಇವರುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದ ಉದ್ಘಾಟನೆಯನ್ನು ತೊರೆನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಜಿ. ರೂಪ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಮಂಡ್ಯ ಪೊಲೀಸ್ ಇನ್ಸ್ಪೆಕ್ಟರ್ ಟಿ.ಬಿ. ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಟಿ.ಬಿ. ಚಿದಾನಂದ, ಗ್ರಾಮ ಪಂಚಾಯಿತಿ ಸದಸ್ಯರಾದ ಸಾವಿತ್ರಿ, ಗಿರೀಶ್, ನಿಂಗಾಜಮ್ಮ, ಸಹಕಾರ ಸಂಘದ ನಿರ್ದೇಶಕ ಶಿವಕುಮಾರ್, ಕಾರ್ಯಕಾರಿ ಮಂಡಳಿ ಕಾರ್ಯದರ್ಶಿ ಟಿ.ಹೆಚ್. ಸೋಮಾಚಾರಿ, ಉಪಾಧ್ಯಕ್ಷ ಪ್ರಕಾಶ್, ಖಜಾಂಚಿ ಜಗದೀಶ್ ಸೇರಿದಂತೆ ಮಂಡಳಿಯ ನಿರ್ದೇಶಕರು ಮತ್ತು ಗ್ರಾಮಸ್ಥರು ಹಾಜರಿದ್ದರು.