ಕೂಡಿಗೆ, ಏ. ೧೫: ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಒಳಪಡುವ ೧೨ ಗ್ರಾಮಗಳ ವ್ಯಾಪ್ತಿಗೆ ಒಳಪಡುವ ೨೪ ರೈತರಿಗೆ ಪ್ರಿಯ ಸೀಡ್ಸ್ ೫೫೫ ಭತ್ತದ ಬೀಜವನ್ನು ವಿತರಣೆ ಮಾಡಲಾಗಿತ್ತು. ಈ ಬೀಜವನ್ನು ತೆಗೆದುಕೊಂಡ ರೈತರು ಬಿತ್ತನೆ ಮಾಡಿ ಬೇಸಾಯ ಮಾಡಿದರೂ ಸಮರ್ಪಕವಾಗಿ ಬೆಳೆ ಬಾರದೆ ಹಾಗೂ ಭತ್ತದ ಕಾಳು ಕಟ್ಟದೆ ಎಕರೆವಾರು ನಷ್ಟವಾಗಿತ್ತು. ನಷ್ಟಕ್ಕೊಳಗಾದ ರೈತರು ಸಹಕಾರ ಸಂಘಕ್ಕೆ ದೂರು ನೀಡಿದ್ದರು.

ದೂರಿನನ್ವಯ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‌ಕುಮಾರ್ ಹೈದರಾಬಾದ್ ಕಂಪೆನಿಯ ಪ್ರಿಯ ಸೀಡ್ಸ್ ಕಂಪೆನಿಯ ಮೈಸೂರು ವಿಭಾಗದ ವಿತರಕರನ್ನು ಮೊದಲು ಕರೆಸಿ ಸ್ಥಳ ಪರಿಶೀಲನೆ ನಡೆಸಿದ್ದರು. ಈ ವ್ಯಕ್ತಿಯಿಂದ ಸಮರ್ಪಕ

(ಮೊದಲ ಪುಟದಿಂದ) ಉತ್ತರ ಬಾರದ ಕಾರಣ ಕಂಪೆನಿಯ ಮುಖ್ಯ ಕೇಂದ್ರ ಹೈದರಾಬಾದ್‌ನ ವಿಭಾಗೀಯ ಅಧಿಕಾರಿ ಹಾಗೂ ದೇಶೀಯ ಮಾರುಕಟ್ಟೆ ವ್ಯವಸ್ಥಾಪಕರನ್ನು ಕೂಡಿಗೆಗೆ ಕರೆಸಿ ಆಯಾ ರೈತರ ಜಮೀನುಗಳಿಗೆ ಭೇಟಿ ನೀಡಿ ಮೂರು ದಿನಗಳ ಕಾಲ ಸ್ಥಳ ಪರಿಶೀಲನೆ ನಡೆಸಲಾಗಿತ್ತು. ನಂತರ ಸಂಘದ ಸಭಾಂಗಣದಲ್ಲಿ ರೈತರ ಸಮ್ಮುಖದಲ್ಲಿ ಸಭೆ ನಡೆಸಿ ಕಳಪೆ ಬಿತ್ತನೆ ಬೀಜ ಎಂಬ ರೈತರ ಆರೋಪದ ಮೇರೆಗೆ ಆಯಾ ರೈತರ ಬೆಳೆ ನಷ್ಟವಾಗಿರುವ ಆಧಾರದ ಮೇಲೆ ಪರಿಹಾರ ಕೊಡುವುದಾಗಿ ಪ್ರಧಾನ ವ್ಯವಸ್ಥಾಪಕ ನಿಯಮಾನುಸಾರ ಒಪ್ಪಿ ತೆರಳಿದ್ದರು.

ಒಪ್ಪಿಗೆ ನೀಡುವ ಸಂದರ್ಭ ಮೈಸೂರು ವಿಭಾಗೀಯ ವಿರತರಕರಾಗಿರುವ ವೆಂಕಟೇಶ್‌ನ ಮೇಲೆ ಕಂಪೆನಿಯವರು ಜವಾಬ್ದಾರಿ ಹೊರಿಸಿದ್ದರು. ೧೬.೧೨.೨೦೨೦ ರಂದು ಕಂಪೆನಿಯ ಪರವಾಗಿ ಅಂದೆ ಕರಾರುಪತ್ರ ಒಪ್ಪಂದದ ಮೂಲಕ ವೆಂಕಟೇಶ್ ಬಿನ್ ದೇವಪ್ಪ ೭,೭೯,೭೦೦ ಮೊತ್ತದ ಚೆಕ್‌ಅನ್ನು ಸಂಘಕ್ಕೆ ನೀಡಿದ್ದರು.

ನಂತರ ಕಂಪೆನಿಯು ಹೈದರಾಬಾದ್‌ನಲ್ಲಿ ಸಭೆ ನಡೆಸಿ ರೂ. ೫,೫೪,೩೫೦ ನೀಡಲು ಒಪ್ಪಿಕೊಂಡಿತು. ಆ ಒಪ್ಪಂದದ ಪ್ರಕಾರ ಕಂಪೆನಿಯು ವಿತರಕ ವೆಂಕಟೇಶ್ ಮೊದಲು ಕಂಪೆನಿಯಲ್ಲಿ ಠೇವಣಿಯಾಗಿ ಇರಿಸಿದ್ದ ರೂ. ೪,೨೭,೭೬೧ ಮತ್ತು ಕಂಪೆನಿ ಮೂಲಕ ರೂ. ೧,೨೬,೫೯೯ ಸೇರಿ ಒಟ್ಟು ೫,೫೪,೩೫೦ ರೂಗಳನ್ನು ವೆಂಕಟೇಶ್‌ನ ಖಾತೆಯಿಂದ ಪಡೆದುಕೊಳ್ಳಲು ತಿಳಿಸಿತ್ತು. ವೆಂಕಟೇಶ್‌ನು ರೂ. ೭,೭೯,೭೦೦ ಮೊತ್ತದ ಚೆಕ್ ಸಂಘದ ಹೆಸರಿಗೆ ನೀಡಿದ್ದರು.

ಈ ಹಣವು ವೆಂಕಟೇಶನ ಮೂಲಕ ರೈತರಿಗೆ ಪರಿಹಾರ ನೀಡುವ ಸಲುವಾಗಿ ೨೦.೦೩.೨೦೨೧ ರಲ್ಲಿ ಕೂಡಿಗೆ ಕೆನರಾ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಇದರನ್ವಯ ಬಿತ್ತನೆ ಬೀಜದ ಕಂಪೆನಿಯಿAದ ರೈತರಿಗೆ ಪರಿಹಾರ ಬಂದಿದೆ ಎಂದು ಆಡಳಿತ ಮಂಡಳಿಯವರು ತೀರ್ಮಾನ ಮಾಡಿ ಸಂಘದ ವ್ಯಾಪ್ತಿಗೆ ಒಳಪಡುವ ೨೪ ರೈತರಿಗೆ ಭತ್ತ ಮತ್ತು ಹುಲ್ಲಿನ ನಷ್ಟದ ಮೊತ್ತವಾಗಿ ೫,೫೪,೩೫೦ ರೂಗಳನ್ನು ಸಂಘದಿAದ ರೈತರಿಗೆ ವಿತರಣೆ ಮಾಡಿದರು.

ಸಂಘದ ವ್ಯವಹಾರವು ಸ್ಥಳೀಯ ಕೆನರಾ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿದೆ ಎಂದು ಸಂಘದ ಕೆನರಾ ಬ್ಯಾಂಕ್ ಪಾಸ್ ಪುಸ್ತಕಕ್ಕೆ ರೂ. ೭,೭೯,೭೦೦ ತಾ. ೨೩.೦೩.೨೦೨೧ ರಂದು ನಮೂದಾಗಿದೆ. ಅದೇ ದಿನ ಸಂಘದ ಖಾತೆಗೆ ಬೇರೆ ಮೂಲಗಳ ಹಣ ಸಂದಾಯವಾಗಿರುವ ದಾಖಲೆಗಳು ಪಾಸ್‌ಬುಕ್‌ನಲ್ಲಿ ನೋಂದಣಿಯಾಗಿವೆ. ದಿನಾಂಕ ೩೦.೦೩.೨೧ ರಂದು ರೈತರಿಗೆ ಹಣ ವಿತರಣೆಯಾದ ನಂತರ ಸ್ಥಳೀಯ ಕೆನರಾ ಬ್ಯಾಂಕ್‌ನಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಬ್ಯಾಂಕ್ ವ್ಯವಹಾರಕ್ಕೆ ತೆರಳಿದ ಸಂದರ್ಭ ಖಾತೆಯಲ್ಲಿ ಹಣ ಇಲ್ಲದಿರುವುದು ರೂ. ೭,೭೯,೭೦೦ ಮರಳಿ ವಾಪಾಸ್ ಹೋಗಿರುವುದು ಕಂಡುಬAದಿದೆ. ಇದಕ್ಕೆ ಸಂಬAಧಪಟ್ಟAತೆ ವಿತರಕ ವೆಂಕಟೇಶನನ್ನು ಸಂಘದ ಅಧ್ಯಕ್ಷ ಮತ್ತು ಆಡಳಿತ ಮಂಡಳಿಯವರು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅದೇ ದಿನ ಹಣ ಮರಳಿ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇದರಿಂದಾಗಿ ವೆಂಕಟೇಶ್ ಮತ್ತು ಕೆನರಾ ಬ್ಯಾಂಕ್ ವ್ಯವಸ್ಥಾಪಕರು ಸಂಘಕ್ಕೆ ವಂಚನೆ ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್‌ಕುಮಾರ್ ಹೇಳಿದ್ದಾರೆ.

ಈ ಬೆಳವಣಿಗೆ ಸಂಘದ ವ್ಯವಸ್ಥಾಪಕಿ ಮೀನಾ ಅವರ ಗಮನಕ್ಕೆ ಬಂದ ಬಳಿಕ ಆಡಳಿತ ಮಂಡಳಿ ಅಧ್ಯಕ್ಷರ ಗಮನಕ್ಕೆ ತಂದು ಹಣ ಕೆನರಾ ಬ್ಯಾಂಕ್ ಮೂಲಕ ಸಂಘದ ಖಾತೆಗೆ ಬಂದು ಪಾಸ್‌ಬುಕ್‌ಗೆ ನೋಂದಣಿಯಾಗಿ ವಾಪಾಸ್ ವೆಂಕಟೇಶ್‌ಗೆ ಹೋಗಿರುವುದು ಆಶ್ಚರ್ಯಕರ ವಿಷಯವಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ಆಡಳಿತ ಮಂಡಳಿಯು ಈ ಸಂಬAಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ೯.೦೪.೨೧ ರಂದು ಮೋಸ ಮಾಡಿರುವ ಬಗ್ಗೆ ಕೂಡಿಗೆ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮತ್ತು ವೆಂಕಟೇಶ್ ವಿರುದ್ಧ ದೂರು ನೀಡಿದ್ದಾರೆ.

ಇಂದು ಈ ಸಂಬAಧ ಸಂಘದ ಅಧ್ಯಕ್ಷ ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು. ಪ್ರಕರಣದ ಕುರಿತು ಕಾನೂನಾತ್ಮಕ ಹೋರಾಟ ಮಾಡಲು ಸಭೆ ತೀರ್ಮಾನಿಸಿತು. ಸಂಘದ ನಿರ್ದೇಶಕರುಗಳಾದ ಕೆ.ಟಿ. ಅರುಣಕುಮಾರ್, ಎಸ್.ಎನ್. ರಾಜಾರಾವ್, ಕೆ.ಕೆ. ಭೋಗಪ್ಪ, ತಮ್ಮಣ್ಣೇಗೌಡ, ಟಿ.ಕೆ. ವಿಶ್ವನಾಥ್, ಲಕ್ಷಣರಾಜ್ ಅರಸ್, ಬಸಪ್ಪ, ರಮೇಶ್, ಮಂಜೇಗೌಡ, ಪಾರ್ವತಪ್ಪ ರಾಮೇಗೌಡ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಪಿ. ಮೀನಾ ಇದ್ದರು. - ಕೆ.ಕೆ. ನಾಗರಾಜಶೆಟ್ಟಿ.