ನಾಪೋಕ್ಲು, ಏ ೧೨: ಸಮೀಪದ ಕಕ್ಕಬ್ಬೆ ಬಳಿಯ ಯವಕಪಾಡಿ ಗ್ರಾಮದ ಪೌರಾಣಿಕ ಹಿನ್ನೆಲೆಯ ಆದಿ ಶ್ರೀ ಪನ್ನಂಗಾಲತ್ತಮ್ಮೆ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು.

ತಾ. ೧೨ರ ಮಧ್ಯಾಹ್ನ ೧೨ ಗಂಟೆಗೆ ಶ್ರೀ ಇಗ್ಗುತ್ತಪ್ಪ ದೇವರಿಗೆ ಮಹಾಪೂಜೆ ಸಲ್ಲಿಸಿದ ನಂತರ ಕಣಿಯರ ಐನ್ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ, ತೀರ್ಥ ಸ್ನಾನದ ಬಳಿಕ ಓಲಿಯಿಂದ ತಯಾರಿಸಿದ ಎರಡು ಕೊಡೆಗೆ ಬಣ್ಣ ಹಚ್ಚಿದ ನಂತರ ಮತ್ತೆ ಕಣಿಯರ ಮನೆಯ ಬಳಿಯಿರುವ ಸುಮಾರು ಒಂದು ಸಾವಿರ ವರ್ಷಗಳ ಹಳೆಯದಾದ ಮಾವಿನ ಮರದ ಬುಡದಲ್ಲಿ ಪೂಜಿಸಿ, ಎರಡು ಕೊಡೆ ಮತ್ತು ಅದಕ್ಕೆ ಅಳವಡಿಸುವ ಬಿದಿರುಗಳನ್ನು ಕಣಿಯರ ಕುಟುಂಬಸ್ಥರು ಮತ್ತು ಅಂಜರಿಕೆ ಕುಡಿಯವರು ಸೇರಿ ಪನ್ನಂಗಾಲ ದೇವಸ್ಥಾನದತ್ತ ಕೊಂಡೊಯ್ಯ ಲಾಯಿತು.

ನಂತರ ಪನ್ನಂಗಾಲ ಗದ್ದೆಯಲ್ಲಿ ಸೇರಿದ ಭಕ್ತ ಸಮೂಹಕ್ಕೆ ದೇವಿಯ ಕೊಡೆಯು ಗಿರ ಗಿರನೆ ತಿರುಗುವದರ ಮೂಲಕ ದರ್ಶನ ನೀಡಿತು. ಈ ಸಂದರ್ಭದಲ್ಲಿ ಶ್ರೀ ಆದಿ ಶಕ್ತಿ ಪನ್ನಂಗಾಲತ್ತಮ್ಮೆ ದೇವಸ್ಥಾನ ವಿವಿಧ ದೈವ ಪಾತ್ರಿಗಳು, ತಕ್ಕ ಮುಖ್ಯಸ್ಥರು ಕೊಡೆಯನ್ನು ಶ್ರದ್ಧಾ ಭಕ್ತಿಯಿಂದ ದೇವಸ್ಥಾನಕ್ಕೆ ಬರಮಾಡಿಕೊಂಡು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ತಾ. ೧೩ರಂದು ನಡೆಯಲಿರುವ ಕುರುಂದ ಹಬ್ಬದೊಂದಿಗೆ ವಾರ್ಷಿಕೋತ್ಸವ ಸಂಪನ್ನಗೊಳ್ಳಲಿದೆ.