*ಗೋಣಿಕೊಪ್ಪಲು, ಏ. ೧೨: ಜೇಡಿ ಮಣ್ಣಿನ ಬೋಗುಣಿ ಮತ್ತು ತಂಪುಪಾನೀಯ ಬಾಟಲಿಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ಪಕ್ಷಿಗಳ ದಾಹ ನೀಗಿಸಲು ವಿಶೇಷ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಶಾಲೆಯ ಆವರಣದಲ್ಲಿ ಸುಮಾರು ೧೦ ಕ್ಕೂ ಹೆಚ್ಚು ಜೇಡಿ ಮಣ್ಣಿನ ಬೋಗುಣಿ, ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿಕೊಂಡು ವಿಶೇಷ ಪ್ರಯತ್ನ ದಿಂದ ನೀರು ತುಂಬಿಸಿ ಪಕ್ಷಿಗಳ ದಾಹ ನೀಗಿಸಲು ಪ್ರಯತ್ನಿಸಿದ್ದಾರೆ.

ಬೇಸಿಗೆ ಸಂದರ್ಭ ಕೆರೆ, ತೊರೆ ನದಿಗಳು ಬತ್ತುತ್ತಿರುವುದನ್ನು ಮನಗಂಡು ಶಾಲೆಯ ವಿಜ್ಞಾನ ಶಿಕ್ಷಕರಾದ ಕೃಷ್ಣ ಚೈತನ್ಯ ಅವರು ಮಕ್ಕಳಿಗೆ ಸಲಹೆ ಸೂಚನೆಗಳನ್ನು ನೀಡುವ ಮೂಲಕ ಪ್ರಾಯೋಗಿಕವಾಗಿ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದರಿಂದ ಸಫಲತೆಯನ್ನು ಕಂಡು ಕೊಂಡು ಪಕ್ಷಿಗಳಿಗೆ ನೀರುಣಿಸುವ ಮೂಲಕ ಪಕ್ಷಿ ಸಂರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ. ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯ ಆವರಣದಲ್ಲಿ ಶಾಲೆಯ ಟೈಗರ್ ಪಗ್ ಪರಿಸರ ಸಂಘದ ವತಿಯಿಂದ ಈ ಪ್ರಯತ್ನ ನಡೆದಿದ್ದು, ಶಾಲೆಯ ಮುಖ್ಯ ಶಿಕ್ಷಕ ರತೀಶ್ ರೈ ಅವರು ಪಕ್ಷಿ ಸಂರಕ್ಷಣೆಯ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಹಲವು ವರ್ಷಗಳಿಂದ ನಿರಂತರವಾಗಿ ಮನೆಯಲ್ಲಿ ಪಕ್ಷಿಗಳು ನೀರು ಕುಡಿಯಲೆಂದು ಇಟ್ಟಿರುವ ಸಿಮೆಂಟ್ ತೊಟ್ಟಿಯಲ್ಲಿ ಪಕ್ಷಿಗಳು ಬಾಯಾರಿಕೆ ನೀಗಿಸುಕೊಳ್ಳುವುದು ಮತ್ತು ಸ್ನಾನ ಮಾಡುವುದನ್ನು ಕಂಡು ಶಾಲೆಯ ಲ್ಲಿಯೂ ಈ ವ್ಯವಸ್ಥೆ ತರಬೇಕು. ಮಕ್ಕಳ ಲ್ಲಿ ಪಕ್ಷಿ ಜ್ಞಾನವನ್ನು ಹೆಚ್ಚಿಸಬೇಕೆಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಶಾಲೆಯಲ್ಲಿ ನಡೆಸುತ್ತಿರುವುದಾಗಿ ಕೃಷ್ಣ ಚೈತನ್ಯ ಈ ಸಂದರ್ಭ ತಿಳಿಸಿದ್ದಾರೆ.

-ಎನ್.ಎನ್. ದಿನೇಶ್