ಮಡಿಕೇರಿ, ಏ. ೧೧: ಮೈಸೂರು ಮೃಗಾಲಯದಿಂದ ನಾಗರಹೊಳೆ ಅಭಯಾರಣ್ಯಕ್ಕೆ ಹುಲಿಗಳನ್ನು ಬಿಡಲಾಗಿದೆ ಎಂದು ಹೈಕೋರ್ಟ್ ವಕೀಲ ರವೀಂದ್ರನಾಥ್ ಕಾಮತ್ ಸಂಶಯ ವ್ಯಕ್ತಪಡಿಸಿದ್ದು, ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಸಂಬAಧ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ಮಾನವ ಹಾಗೂ ಜಾನುವಾರುಗಳ ಮೇಲೆ ಹುಲಿ ದಾಳಿ ಪ್ರಕರಣಗಳು ಹೆಚ್ಚಾಗಿ ನಡೆದಿದೆ. ಮೃಗಾಲಯದಲ್ಲಿ ೧೨ ಹುಲಿಗಳನ್ನು ಪೋಷಣೆ ಮಾಡಲು ಕಷ್ಟಸಾಧ್ಯವಾಗಿರುವುದರಿಂದ ನಾಗರಹೊಳೆ ಅರಣ್ಯಕ್ಕೆ ಬಿಟ್ಟಿರುವ ಸಂದೇಹ ಇದೆ. ಈ ಹಿನ್ನೆಲೆ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಇಷ್ಟು ವರ್ಷ ಇಲ್ಲದ ಈ ಸಮಸ್ಯೆ ತಲೆದೋರಲು ಕಾರಣವೇನೆಂದು ಪ್ರಶ್ನಿಸಿದ ಅವರು, ಒಂದು ಹುಲಿ ೧೨ ದಿನಕ್ಕೊಮ್ಮೆ ಬೇಟೆಯಾಡುತ್ತದೆ. ಬೇಟೆಯಾಡಿ ಭಕ್ಷಣೆ ಮಾಡಿದ ೧೨ ದಿನಗಳು ಹುಲಿ ಬೇಟೆಯಾಡುವುದಿಲ್ಲ. ಹುಲಿ ಆಹಾರ ಸಿಗದೆ ವ್ಯಾಘ್ರನಾದಾಗ ಬೇಟೆಯಾಡಿ ರಕ್ತ ಹೀರಿದ ೩ ದಿನದ ನಂತರ ಮಾಂಸವನ್ನು ತಿನ್ನುತ್ತದೆ. ಹುಲಿದಾಳಿಯನ್ನು ಗಂಭೀರವಾಗಿ ಪರಿಗಣಿಸಿ ತಜ್ಞರ ತಂಡ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಬೇಕು. ಹುಲಿದಾಳಿಯಿಂದ ಜಾನುವಾರು ಬಲಿಯಾದರೆ ಕನಿಷ್ಟ ರೂ ೫೦ ಸಾವಿರ, ಮಾನವ ಜೀವಹಾನಿಗೆ ರೂ ೫ ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಆದಾಯ ಕೊರತೆಯಿಂದ ಹುಲಿಗಳಿಗೆ ಆಹಾರ ಪೂರೈಸಲಾಗದೆ ಈ ರೀತಿ ನಡೆ ಅಧಿಕಾರಿಗಳು ಅನುಸರಿಸಿರಬಹುದು ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಕೊಡಗು ಜಿಲ್ಲೆಯ ವಕೀಲ ಕೃಷ್ಣಮೂರ್ತಿ ಇದ್ದರು.