ವೀರಾಜಪೇಟೆ, ಏ. ೧೧: ಪ್ಲಾಸ್ಟಿಕ್ ಬಳಕೆ ಮಾರಕವಾಗಿದ್ದು, ಇದರ ಬದಲು ಬಟ್ಟೆಯ ಕೈಚೀಲವನ್ನು ಬಳಕೆ ಮಾಡುವುದು ಸೂಕ್ತ ಎಂದು ವೀರಾಜಪೇಟೆ ನ್ಯಾಯಾಲಯದ ಪ್ರಧಾನ ಪ್ರಿನ್ಸಿಪಲ್ ನ್ಯಾಯಾಧೀಶ ಸಿ. ಕೋನಪ್ಪ ಅವರು ಸಲಹೆ ಮಾಡಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ವತಿಯಿಂದ ಪ್ಲಾಸ್ಟಿಕ್ ಬಳಕೆ ಮುಕ್ತ ಜಾಗೃತಿ ಜಾಥಾವನ್ನು ಹಸಿರು ನಿಶಾನೆ ತೋರುವ ಮೂಲಕ ಉದ್ಘಾಟಿಸಿ ಮಾತನಾಡಿದ ನ್ಯಾಯಧೀಶರು, ಪ್ಲಾಸ್ಟಿಕ್ ಬಳಕೆಯಿಂದ ಮಾನವ ಸಮಾಜಕ್ಕೆ ಹಾನಿಕಾರಕವಾಗಿದೆ. ಭೂಮಿಯಲ್ಲಿ ಪ್ಲಾಸ್ಟಿಕ್ ಕರಗದೆ ಹಲವು ರೋಗರುಜಿನಗಳಿಗೆ ಕಾರಣವಾಗುತ್ತದೆ. ಜಾನುವಾರುಗಳು ತಮಗೆ ಅರಿವಿಲ್ಲದೆ ಪ್ಲಾಸ್ಟಿಕ್ ತಿಂದು ಜೀರ್ಣವಾಗದೆ ಸಾವು ಸಂಭವಿಸುತ್ತಿರುವುದು ಕಂಡು ಬಂದಿದೆ. ಪ್ಲಾಸ್ಟಿಕ್ನಿಂದ ಉತ್ಪತ್ತಿಯಾಗುವ ಹೊಗೆಯು ಪರಿಸರದಲ್ಲಿ ವಿಲೀನವಾಗಿ ಉಸಿರಾಟಕ್ಕೆ ತೊಂದರೆಯಾಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಗ್ರಾಹಕರು ಮತ್ತು ವಾಣಿಜ್ಯೋದ್ಯಮಿಗಳು ಪ್ಲಾಸ್ಟಿಕ್ ಬಳಕೆಯಿಂದ ದೂರವಾಗಬೇಕು. ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಸಾರ್ವಜನಿಕರು ದೈಹಿಕ ಅಂತರ ಪಾಲಿಸಬೇಕು ಅಲ್ಲದೆ ಮಾಸ್ಕ್ ಕಡ್ಡಾಯವಾಗಿ ಧರಿಸಿ ಸೋ ಂಕು ಹರಡದಂತೆ ಜಾಗೃತರಾಗಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಪ್ಲಾಸ್ಟಿಕ್ ಮುಕ್ತ ವೀರಾಜಪೇಟೆ ನಗರ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ಲಾಸ್ಟಿಕ್ ಬಳಕೆದಾರರಿಗೆ ದಂಡದ ರೂಪದಲ್ಲಿ ಪ್ರಥಮವಾಗಿ ರೂ. ೫೦೦, ದ್ವಿತೀಯ ಬಾರಿಗೆ ರೂ. ೨೦೦೦ ಮತ್ತು ತೃತೀಯ ಬಾರಿಗೆ ರೂ. ೧೦,೦೦೦ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಹೆಚ್.ಎಸ್. ಮತೀನ್, ಪಟ್ಟಣ ಪಂಚಾಯಿತಿ ಸಿಬ್ಬಂದಿಗಳಾದ ಸೋಮಶೇಖರ್, ರಜನಿ, ಅಪ್ಪಯ್ಯ ಸ್ವಾಮಿ ರಸ್ತೆಯ ಸ್ನೇಹಿತರ ಬಳಗದ ಸದಸ್ಯರು, ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಹಾಜರಿದ್ದರು.