ಮಡಿಕೇರಿ, ಏ. ೧೧: ಕುಟ್ಟಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವತಿಯಿಂದ ಹಾತೂರು ಗ್ರಾಮ ಪಂಚಾಯಿತಿ ನೆರವಿನೊಂದಿಗೆ ಹಾತೂರು ಉಪಕೇಂದ್ರದಲ್ಲಿ ೪೫ ವರ್ಷ ಮೇಲ್ಪಟ್ಟ ಎಲ್ಲಾ ಸಾರ್ವಜನಿಕರಿಗೂ ಕೋವಿಡ್ ೧೯ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು, ಸುಮಾರು ೧೩೮ ಫಲಾನುಭವಿಗಳು ಲಸಿಕೆ ಪಡೆದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮೋಹನ್ ಹಾಗೂ ವೀರಾಜಪೇಟೆ ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಯತಿರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿ ಲಸಿಕೆ ಅತ್ಯಂತ ಸುರಕ್ಷಿತವಾಗಿದ್ದು, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಲಸಿಕೆ ಪಡೆಯಲು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.

ವೈದ್ಯಾಧಿಕಾರಿಗಳು, ಶುಶ್ರೂಷಕಿ, ಆರೋಗ್ಯ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು. ತಾ. ೧೬ರಂದು ಹಾತೂರು ಉಪಕೇಂದ್ರದಲ್ಲಿ, ತಾ. ೧೭ರಂದು ಕೈಕೇರಿ ಉಪಕೇಂದ್ರದಲ್ಲಿ ಲಸಿಕಾ ಅಭಿಯಾನ ನಡೆಯಲಿದ್ದು, ಸಾರ್ವಜನಿಕರು ಲಸಿಕೆ ಪಡೆದುಕೊಳ್ಳಲು ಗುರುತಿನ ಚೀಟಿಯೊಂದಿಗೆ ಬರಬೇಕೆಂದು ವೈದ್ಯಾಧಿಕಾರಿ ಮನವಿ ಮಾಡಿದ್ದಾರೆ.