ಮಡಿಕೇರಿ, ಏ. ೧೧: ಮಡಿಕೇರಿ ನಗರಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸಲು ಕೇವಲ ಎರಡು ದಿನ ಮಾತ್ರ ಅವಕಾಶವಿದೆ. ತಾ. ೧೨ರ ಸೋಮವಾರ ಹಾಗೂ ತಾ. ೧೫ರ ಗುರುವಾರದಂದು ಮಾತ್ರ ಚುನಾವಣಾ ಆಯೋಗದ ನಿರ್ದೇಶನದಂತೆ ನಾಮಪತ್ರ ಸಲ್ಲಿಸಬಹುದಾಗಿದೆ. ತಾ. ೮ರಂದು ಅಧಿಸೂಚನೆ ಪ್ರಕಟಿಸಲಾಗಿದ್ದು, ತಾ. ೧೫ ಅಂತಿಮ ದಿನವಾಗಿದೆ. ಆದರೆ, ತಾ. ೧೦, ೧೧, ೧೩ ಹಾಗೂ ೧೪ರಂದು ರಜಾದಿನಗಳಾಗಿರುವ ಕಾರಣ ಈ ದಿನಗಳಲ್ಲಿ ನಾಮಪತ್ರ ಸ್ವೀಕಾರ ಇಲ್ಲ. ವಿಶೇಷವೆಂದರೆ ಅಧಿಸೂಚನೆ ಬಳಿಕ ಈತನಕವೂ ಒಂದೇ ಒಂದು ನಾಮಪತ್ರ ಕೂಡ ಸಲ್ಲಿಕೆಯಾಗಿಲ್ಲ.

ನಗರದ ೨೩ ವಾರ್ಡ್ಗಳಿಗೆ ಚುನಾವಣೆ ನಡೆಯಬೇಕಿದ್ದು. ಇದು ಪಕ್ಷ ಆಧಾರಿತ ಚುನಾವಣೆಯಾಗಿದೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಸ್‌ಡಿಪಿಐ, ಆಮ್‌ಆದ್ಮಿ ಪಕ್ಷ ಸೇರಿದಂತೆ ಪಕ್ಷೇತರರ ಸ್ಪರ್ಧೆ ಕೂಡ ಖಚಿತವೆನ್ನಬಹುದಾಗಿದೆ. ಆದರೂ ಈತನಕ ಕರ್ತವ್ಯ ನಿರ್ವಹಣೆ ಇದ್ದ ದಿನಗಳಲ್ಲಿ ಯಾವುದೇ ನಾಮಪತ್ರ ಸಲ್ಲಿಕೆಯಾಗದಿರುವುದು ಸೋಜಿಗವಾಗಿದೆ.

ಈ ಹಿನ್ನೆಲೆಯಲ್ಲಿ ತಾ. ೧೨ರಂದು (ಇಂದು) ಹಾಗೂ ತಾ. ೧೫ರಂದು ಭಾರೀ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯಲಿರುವುದು ಖಚಿತವಾಗಿದೆ. ಪ್ರಮುಖ ಪಕ್ಷಗಳಲ್ಲಿ ಸ್ಪರ್ಧಾಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದರಿಂದ ಪಟ್ಟಿಯನ್ನು ಅಂತಿಮಗೊಳಿಸುವುದೇ ಆಯಾ ಪಕ್ಷದವರಿಗೆ ಪ್ರಯಾಸಕರವಾಗಿದ್ದು, ಈ ಸವಾಲನ್ನು ಎದುರಿಸುವ ಪ್ರಯತ್ನ ಇನ್ನೂ ಮುಂದುವರೆಯುತ್ತಿದೆ.