ಗೋಣಿಕೊಪ್ಪಲು, ಏ. ೧೦: ದ. ಕೊಡಗಿನಲ್ಲಿ ದಿನದಿಂದ ದಿನಕ್ಕೆ ವ್ಯಾಘ್ರನ ದಾಳಿ ಮುಂದುವರೆದಿದ್ದು ಇದೀಗ ಪೊನ್ನಪ್ಪಸಂತೆ ಸಮೀಪದ ನಲ್ಲೂರಿನ ಪುಚ್ಚಿಮಾಡ ಲಾಲಾ ಪೂಣಚ್ಚ ಎಂಬವರಿಗೆ ಸೇರಿದ ಎಮ್ಮೆಯ ಮೇಲೆ ಹುಲಿ ದಾಳಿ ನಡೆಸಿದ್ದು ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದೆ. ಎಮ್ಮೆಯು ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದೆ.ಇಂದು ಮುಂಜಾನೆ ೩.೩೦ರ ಸುಮಾರಿಗೆ ಮನೆಯ ಸಮೀಪದ ಕೊಟ್ಟಿಗೆಯಲ್ಲಿದ್ದ ಎಮ್ಮೆಯ ಮೇಲೆ ಹುಲಿ ದಾಳಿ ನಡೆಸಿದೆ. ಈ ವೇಳೆ ಕೊಟ್ಟಿಗೆಯಲ್ಲಿದ್ದ ಉಳಿದ ಎಮ್ಮೆಗಳು ಜೋರಾಗಿ ಕಿರುಚಿಕೊಂಡಾಗ ಹುಲಿಯು ಬೆದರಿ ಓಡಿಹೋಗಿದೆ. ಎಮ್ಮೆಗಳ ಕಿರುಚಾಟದಿಂದ ಮಾಲೀಕರು ಹಾಗೂ ಕಾರ್ಮಿಕರು ಹೊರ ಬಂದು ಟಾರ್ಚ್ ಬೆಳಕಿನ ಮೂಲಕ ನೋಡಿದಾಗ ಹುಲಿಯು ಸಮೀಪದ ತೋಟದಲ್ಲಿ ಮರೆಯಾಗಿದೆ.

ಕೆಲ ದಿನಗಳ ಹಿಂದೆ ಹುಲಿಯು ಬಾಳೆಲೆ ಸಮೀಪದ ಸ್ವಾತಿ ಕುಟ್ಟಯ್ಯ ಎಂಬವರಿಗೆ ಸೇರಿದ ಹಸುವನ್ನು ಕೊಂದು ಮೇಕೆಯನ್ನು ಹೊತ್ತೊಯ್ದಿತ್ತು. ಇದೇ ಹುಲಿಯು ಈ ಭಾಗದಲ್ಲಿ ಸಂಚರಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹುಲಿಯು ಇದೀಗ ಮತ್ತೆ ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಮೂಲಕ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ.

ಹುಲಿ ಸೆರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹುಲಿ ಸಂಚಾರದ ಸ್ಥಳಗಳಲ್ಲಿ ಬೋನ್‌ಗಳನ್ನು ಅಳವಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.