ಅಮ್ಮತ್ತಿ, ಏ. ೧೦: ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಮಿಲನ್ಸ್ ಅಮ್ಮತ್ತಿ ಸಂಯುಕ್ತಾಶ್ರಯದಲ್ಲಿ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾದ ೧೫ನೇ ವರ್ಷದ ಜಿಲ್ಲಾ ಫುಟ್ಬಾಲ್ ಲೀಗ್ ಪಂದ್ಯಾವಳಿಯನ್ನು ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಅಯ್ಯಪ್ಪ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಮಯ ನಿಷ್ಠೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.ಮಿಲನ್ಸ್ ಕ್ಲಬ್ ಅಮ್ಮತ್ತಿಯ ಅಧ್ಯಕ್ಷ ಸಿಜು ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಾರ್ಮಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿರಣ್ ನಾಣಯ್ಯ ಮಿಲನ್ಸ್ ತಂಡದ ಶ್ರಮವನ್ನು ಶ್ಲಾಘಿಸಿದರು.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕಾರ್ಮಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮುಕ್ಕಾಟಿರ ಬೋಪಣ್ಣ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಉಪಾಧ್ಯಕ್ಷೆ ದೇಚಮ್ಮ, ಜಿಲ್ಲಾ ಫುಟ್ಬಾಲ್ ತೀರ್ಪುಗಾರರ ಸಂಘದ ಅಧ್ಯಕ್ಷ ನಾಗೇಶ್, ದಾನಿಗಳಾದ ಜಯದೀಪ್, ಹನೀಫಾ ಕೆ.ಹೆಚ್., ಚುಮ್ಮಿ ರಾಯ್, ವಿನು ಅಂತೋನಿ, ದೀಪು ಮಾಚಯ್ಯ, ಆಶೀಕ್ ವಿ.ಎಂ, ಅರುಣ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಪ್ರಥಮ ಪಂದ್ಯದಲ್ಲಿ ರೊಝಾರಿಯನ್ಸ್ ಗೋಣಿಕೊಪ್ಪ ಹಾಗು ವೈಷ್ಣವಿ ಎಫ್.ಸಿ. ಮರಗೋಡು ೩-೩ರ ಸಮಬಲ ಸಾಧಿಸಿದರೆ, ದ್ವಿತೀಯ ಪಂದ್ಯದಲ್ಲಿ ಶೈನಿಂಗ್ ಬರ್ಡ್ ಪಾಲಿಬೆಟ್ಟ ಚೌಡೇಶ್ವರಿ ಅಮ್ಮತ್ತಿ ತಂಡದ ವಿರುದ್ಧ ೮-೨ರ ಗೋಲುಗಳ ರೋಚಕ ಗೆಲುವು ಸಾಧಿಸಿತು. ತೃತೀಯ ಪಂದ್ಯದಲ್ಲಿ ಯೂನಿವರ್ಸಲ್ ರಂಗಸಮುದ್ರ ತಂಡದ ವಿರುದ್ಧ ಎನ್.ವೈ.ಸಿ ಕೊಡಗರಹಳ್ಳಿ ತಂಡ
೧-೦ ಗೆಲುವು ಕಂಡಿತು. ಆಕ್ಸ್ಫರ್ಡ್ ವೀರಾಜಪೇಟೆ ತಂಡ ಐಎನ್‌ಎಸ್ ಗುಡ್ಡೆಹೊಸೂರು ತಂಡದ ವಿರುದ್ಧ
೧-೩ರ ಸೋಲು ಅನುಭವಿಸಿದರೆ, ಸಹರಾ ಸಿವೈಸಿ ಒಂಟಿಯAಗಡಿ ತಂಡ ಹಾಗೂ ಅಮಿಟಿ ಗದ್ದೆಹಳ್ಳ ತಂಡ ಸಮಬಲ ಸಾಧಿಸಿತು.