ಸುಂಟಿಕೊಪ್ಪ, ಏ. ೧೦: ಚೆಟ್ಟಳ್ಳಿ ರಸ್ತೆಯ ನಾರ್ಗಾಣೆ ಗ್ರಾಮದ ಶ್ರೀ ದೇವಿಯಲ್ಲಿರುವ ಅಣ್ಣಪ್ಪ ಸ್ವಾಮಿ ದೇವಾಲಯದಲ್ಲಿ ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಧರ್ಮ ದೈವದ ನೇಮೋತ್ಸವ ತಾ. ೧೪ ಮತ್ತು ೧೫ ರಂದು ನಡೆಯಲಿದೆ.
ತಾ. ೧೪ ರಂದು ರಾತ್ರಿ ೮ ಗಂಟೆಗೆ ಭಂಡಾರ ಮೆರವಣಿಗೆ, ೮.೩೦ಕ್ಕೆ ಎಣ್ಣೆ ಅರ್ಪಣೆ, ೧೦ ಗಂಟೆಯ ನಂತರ ಕಲ್ಲುರ್ಟಿ ದೈವದ ನೇಮ ಹಾಗೂ ಗಂಧ ಪ್ರಸಾದ ವಿತರಣೆ, ರಾತ್ರಿ ೧ ಗಂಟೆಗೆ ಧರ್ಮ ದೈವವಾದ ಅಣ್ಣಪ್ಪ, ಪಂಜುರ್ಲಿ ದೈವದ ನೇಮ, ರಾತ್ರಿ ೩ ಗಂಟೆಯ ನಂತರ ಗುಳಿಗ ಹಾಗೂ ಚಾಮುಂಡೇಶ್ವರಿ ಧರ್ಮ ದೈವದ ಜೋಡಿ ಕೋಲವು ಬೆಳಿಗ್ಗೆ ೭ ಗಂಟೆಯವರೆಗೆ ನಡೆಯಲಿದೆ. ತಾ. ೧೫ ರಂದು ಬೆಳಿಗ್ಗೆ ೯ ಗಂಟೆಗೆ ಧರ್ಮ ದೈವದ ಹರಕೆ, ಬೇಡಿಕೆಗಳನ್ನು ಒಪ್ಪಿಸಲಾಗುವುದು. ಮಧ್ಯಾಹ್ನ ೧.೩೦ಕ್ಕೆ ಅನ್ನಸಂತರ್ಪಣೆ ನಡೆಯಲಿದೆ ಎಂದು ಅಣ್ಣಪ್ಪ ಸ್ವಾಮಿ ದೇವಸ್ಥಾನದ ಮುಖ್ಯಸ್ಥ ಬಿ.ಡಿ. ರಾಜು ರೈ ತಿಳಿಸಿದ್ದಾರೆ.