ಮಡಿಕೇರಿ, ಏ. ೯: ಕಷ್ಟಗಳನ್ನು, ಆರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತೇನೆ ಎಂದು ಹೇಳಿಕೊಂಡು ಬಂದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದ ಮೂವರು ಆರೋಪಿತರನ್ನು ಬಂಧಿಸುವಲ್ಲಿ ಕುಶಾಲನಗರ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೂಲತಃ ಹಾವೇರಿ ಜಿಲ್ಲೆಯ ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನೆಲೆಸಿರುವ ಲಕ್ಷಿö್ಮ (೨೨), ಸುಜಾತ (೨೨), ಲಕ್ಷಿö್ಮ (೨೩) ಬಂಧಿತ ಆರೋಪಿಗಳು. ಆರೋಪಿತರಿಂದ ೧೩೫ ಗ್ರಾಂ ಚಿನ್ನಾಭರಣಗಳು ಹಾಗೂ ೨೭ ಸಾವಿರ ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ೧ನೇ ಬ್ಲಾಕ್ ಬೈಚನಹಳ್ಳಿಗೆ ಒಬ್ಬ ಅಪರಿಚಿತ ಮಹಿಳೆಯು

(ಮೊದಲ ಪುಟದಿಂದ) ಹಣೆಗೆ ವಿಭೂತಿ, ಕುತ್ತಿಗೆಯಲ್ಲಿ ರುದ್ರಾಕ್ಷಿ ಮಣಿ ಧರಿಸಿಕೊಂಡು. ಕೈಯಲ್ಲಿ ಗಂಟೆ ಹಿಡಿದು ಬೈಚನಹಳ್ಳಿಯ ಮನೆಯೊಂದಕ್ಕೆ ಬಂದು ನಿಮ್ಮ ಕಷ್ಟಗಳನ್ನು ಬಗೆಹರಿಸಿಕೊಡುತ್ತೇನೆ ಎಂದು ಹೇಳಿ ಹಣೆ ಮೇಲೆ ಕೈಯಿಟ್ಟು ನಿಮಗೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಮೋಸದಿಂದ ಚಿನ್ನಾಭರಣಗಳನ್ನು ಮತ್ತು ಹಣವನ್ನು ಕದ್ದೊಯ್ದಿದ್ದರು.

ಪ್ರಕರಣವನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ತನಿಖಾ ತಂಡವನ್ನು ರಚಿಸಿ, ತನಿಖೆ ನಡೆಸಿದ ಸಂದರ್ಭ ಕುಶಾಲನಗರ- ಕೊಪ್ಪ ಕಾಫಿ ಡೇ ಸಮೀಪದಲ್ಲಿರುವ ಪೆಟ್ರೋಲ್ ಬಂಕ್ ಬಳಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಡಿವೈಎಸ್ಪಿ ಹೆಚ್.ಎಂ. ಶೈಲೇಂದ್ರ, ಕುಶಾಲನಗರ ಸಿಪಿಐ ಮಹೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಗಣೇಶ್, ಎಎಸ್‌ಐ ಗೋಪಾಲ ಸಿಬ್ಬಂದಿಗಳಾದ ಉಮೇಶ್, ಸುದೀಶ್‌ಕುಮಾರ್, ರಂಜಿತ್, ನಿಶಾ, ಸೌಮ್ಯ ಇದ್ದರು. ಪ್ರಕರಣವನ್ನು ಭೇದಿಸಿದ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಶ್ಲಾಘಿಸಿ ನಗದು ಬಹುಮಾನವನ್ನು ಎಸ್ಪಿ ಘೋಷಿಸಿದ್ದಾರೆ.

ಎಚ್ಚರಿಕೆಯಲ್ಲಿರಲು ಎಸ್ಪಿ ಮನವಿ :

ಈ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿಗಳು ಭಾಗಿಯಾಗಿರುವ ಸಾಧ್ಯತೆಗಳಿದ್ದು ಆರೋಪಿಗಳ ಪತ್ತೆ ಬಗ್ಗೆ ತಂಡ ರಚಿಸಲಾಗಿರುತ್ತದೆ. ಕೊಡಗು ಜಿಲ್ಲೆಯ ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳು ಮಾರು ವೇಷಗಳಲ್ಲಿ ಮನೆಗಳಿಗೆ ಬಂದು ಮನೆಯಲ್ಲಿ ಮಹಿಳೆಯರು ಒಬ್ಬರೇ ಇರುವುದನ್ನು ಖಚಿತಪಡಿಸಿಕೊಂಡು ಕಷ್ಟ ಪರಿಹಾರಗಳನ್ನು ಬಗೆಹರಿಸಿಕೊಡುವುದಾಗಿ ನಂಬಿಸಿ ಆಭರಣಗಳನ್ನು ತೆಗೆದುಕೊಂಡು ಹೋಗುವ ವ್ಯಕ್ತಿಗಳ ಬಗ್ಗೆ ಗಮನ ಹರಿಸಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ. ಹಾಗೂ ಮನೆಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ತೆರಳುವ ಸಂದರ್ಭ ಯಾವುದೇ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಲ್ಲಿಡಬಾರದೆಂದು ಹಾಗೂ ಹಾಗೆ ತೆರಳುವ ಸಂದರ್ಭದಲ್ಲಿ ತಮ್ಮ ಮನೆಗಳಲ್ಲಿ ಪರಿಚಯಸ್ಥರನ್ನು ಉಳಿದುಕೊಳ್ಳುವ ಬಗ್ಗೆ ನೋಡಿಕೊಳ್ಳುವುದು. ಸಾರ್ವಜನಿಕರು ಮನೆಗೆ ಬೀಗ ಹಾಕಿಕೊಂಡು ಹೋಗುವ ವೇಳೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ೧೧೨ ಇಂಡಿಯಾ ಎಂಬ ತಂತ್ರಾAಶವನ್ನು ತಯಾರಿಸಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಇಂತಹ ಅಪರಾಧಗಳನ್ನು ತಡೆಗಟ್ಟುವಲ್ಲಿ ಪೊಲೀಸರೊಂದಿಗೆ ಸಹಕರಿಸಬೇಕೆಂದು ಎಸ್ಪಿ ಕ್ಷಮಾ ಮಿಶ್ರ ಮನವಿ ಮಾಡಿದ್ದಾರೆ.