ಗೋಣಿಕೊಪ್ಪಲು, ಏ. ೯: ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್, ದಿನಬಳಕೆ ವಸ್ತುಗಳ ಬೆಲೆ ಹೆಚ್ಚಾಗಿ ಜನಸಾಮಾನ್ಯರ ಜೀವನದ ಮೇಲೆ ಬರೆ ಬಿದ್ದಿದೆ. ಮೂರು ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ಲಕ್ಷಾಂತರ ರೈತರು ಬೀದಿಗಿಳಿದಿದ್ದಾರೆ. ಈ ನಡುವೆಯೇ ರಸಗೊಬ್ಬರ ಬೆಲೆ ಹೆಚ್ಚಿಸಿ ಮತ್ತಷ್ಟು ಹೊರೆ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರೆ ಕೇಚಮಾಡ ಸರಿತಾ ಪೂಣಚ್ಚ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇಂಡಿಯನ್ ಫಾರ್ಮರ್ಸ್ ಫರ್ಟಿಲೈಜರ್ ಕೋಆಪರೇಟಿವ್ ಲಿಮಿಟೆಡ್ (ಇಫ್ಕೊ) ಇತ್ತೀಚೆಗೆ ನೀಡಿರುವ ನೋಟಿಸ್ ಪ್ರಕಾರ, ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ೧,೨೦೦ ರೂ.ಗಳು ಇದ್ದದ್ದು, ೧,೯೦೦ ರೂ.ಗಳಿಗೆ ಏರಿಕೆಯಾಗಿದೆ. ಏಕಾಏಕಿ ೭೦೦ ರೂಪಾಯಿಗಳನ್ನು ಏರಿಕೆ ಮಾಡಿರುವ ಕ್ರಮಕ್ಕೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದರ ಜೊತೆಗೆ, ಇತರ ಉತ್ಪನ್ನಗಳ ಬೆಲೆಯೂ ಹೆಚ್ಚಾಗಿದೆ.

ರಸಗೊಬ್ಬರವನ್ನು ಒಂದೇ ಬಾರಿ ಈ ಪ್ರಮಾಣದಲ್ಲಿ ಬೆಲೆ ಏರಿಸಿದ ಇತಿಹಾಸವಿಲ್ಲ. ಇದು ರೈತರಿಗೆ ಬಹು ದೊಡ್ಡ ಹೊಡೆತ. ಬೆಲೆ ಏರಿಕೆಗಳ ನಡುವೆ ಜನಸಾಮಾನ್ಯರ ಮೇಲೆ ಸವಾರಿ ಮಾಡುತ್ತಿದೆ ಎಂದು ಆರೋಪಿಸಿದ ಇವರು ಕೇಂದ್ರ ಸರ್ಕಾರ ರೈತನ ಬೆನ್ನೆಲುಬು ಮುರಿದಿದೆ.

ಇಫ್ಕೋ ಮಾಡಿರುವ ಬೆಲೆಗಳ ಹೆಚ್ಚಳವು ರೈತರಿಗೆ ಯಾವುದೇ ರೀತಿಯಲ್ಲಿ ಸಹಾಯವಾಗುವುದಿಲ್ಲ. ಎಲ್ಲಾ ಉತ್ಪನ್ನಗಳ ಬೆಲೆಗಳನ್ನು ಕಡಿಮೆ ಮಾಡಬೇಕು ಎಂದು ಸರಿತಾ ಆಗ್ರಹಿಸಿದ್ದಾರೆ.