ಮಡಿಕೇರಿ, ಏ. ೯: ಮಡಿಕೇರಿ ನಗರಸಭೆ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಅಭ್ಯರ್ಥಿಗಳಾಗಿ ಸ್ಪರ್ಧಿಸಲು ಮುಸ್ಲಿಂ ಆಕಾಂಕ್ಷಿಗಳಿಗೆ ಹೆಚ್ಚಿನ ಸ್ಥಾನಗಳನ್ನು ಮೀಸಲಿಡಬೇಕೆಂದು ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಜೆಡಿಎಸ್ ಪಕ್ಷ ಅಲ್ಪಸಂಖ್ಯಾತರ ವಿಶ್ವಾಸವನ್ನು ಗಳಿಸಿಕೊಂಡಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಹೆಚ್ಚಿನ ಸಂಖ್ಯೆಯ ಅಲ್ಪಸಂಖ್ಯಾತ ಅಭ್ಯರ್ಥಿಗಳು ಮುಂದೆ ಬಂದಿದ್ದಾರೆ. ಇದನ್ನು ಪರಿಗಣಿಸಿ ಮುಸ್ಲಿಮರಿಗೆ ಹೆಚ್ಚಿನ ಸ್ಥಾನಗಳನ್ನು ನೀಡಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್ ಅವರಲ್ಲಿ ಮನವಿ ಮಾಡಿಕೊಂಡಿರುವು ದಾಗಿ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ದ್ವಿಮುಖ ನೀತಿಯಿಂದ ಬೇಸತ್ತಿರುವ ಅನೇಕರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಹಲವರು ಎಸ್‌ಡಿಪಿಐ ಪಕ್ಷದ ಬಗ್ಗೆ ನಿರಾಸಕ್ತಿ ಹೊಂದಿದ್ದು, ಜೆಡಿಎಸ್ ಮೇಲೆ ಹೆಚ್ಚು ಅಭಿಮಾನ ತೋರುತ್ತಿದ್ದಾರೆ. ಅಲ್ಲದೆ ಹೆಚ್ಚಿನ ಸಂಖ್ಯೆಯ ಆಕಾಂಕ್ಷಿಗಳು ಜೆಡಿಎಸ್ ಮೂಲಕ ಸ್ಪರ್ಧಿಸಲು ಮುಂದೆ ಬಂದಿದ್ದು, ಮುಸಲ್ಮಾನರಿಗೂ ವಾರ್ಡ್ಗಳನ್ನು ಮೀಸಲಿಡಬೇಕೆಂದು ಮನವಿ ಮಾಡಿದ್ದಾರೆ.