ಮಡಿಕೇರಿ, ಏ. ೯: ಸಾರಿಗೆ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ ನಡೆಯುತ್ತಿರುವ ಹಿನ್ನೆಲೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಘಟಕ ಮತ್ತು ಬಸ್ ನಿಲ್ದಾಣಗಳಲ್ಲಿ ಕೆಲವು ಕಿಡಿಗೇಡಿಗಳು ಸಾರ್ವಜನಿಕ ಆಸ್ತಿಯನ್ನು ಮತ್ತು ವಾಹನಗಳಿಗೆ ಹಾನಿಯುಂಟು ಮಾಡಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುವ ಸಾಧ್ಯತೆ ಇರುವುದರಿಂದ ಕೊಡಗು ಜಿಲ್ಲೆಯಲ್ಲಿರುವ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಘಟಕ ಮತ್ತು ಬಸ್ ನಿಲ್ದಾಣಗಳ ಪ್ರದೇಶಗಳ ಸುತ್ತಮುತ್ತಲು ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶಿಸಿದ್ದಾರೆ.

ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿ ಮನವಿ ಹಿನ್ನೆಲೆ ಸಾರ್ವಜನಿಕ ಆಸ್ತಿಪಾಸ್ತಿಗಳ ರಕ್ಷಣೆಯ ದೃಷ್ಟಿಯಿಂದ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಾಜ್ಞೆ ಘೋಷಿಸಲಾಗಿದೆ.

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಂಡ ಪ್ರಕ್ರಿಯ ಸಂಹಿತೆ ೧೯೭೩ರ ಕಲಂ ೧೪೪ರಡಿ ದತ್ತವಾದ ಅಧಿಕಾರದಂತೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಿದ್ದಾರೆ.

ಎಲ್ಲಿಲ್ಲಿ ನಿಷೇಧಾಜ್ಞೆ : ಮಡಿಕೇರಿ ಘಟಕ, ಬಸ್ ನಿಲ್ದಾಣ, ಮಡಿಕೇರಿ, ಬಸ್ ನಿಲ್ದಾಣ, ಸೋಮವಾರಪೇಟೆ, ಬಸ್ ನಿಲ್ದಾಣ, ಕುಶಾಲನಗರ, ಬಸ್ ನಿಲ್ದಾಣ, ಹೆಬ್ಬಾಲೆ, ಬಸ್ ನಿಲ್ದಾಣ, ವೀರಾಜಪೇಟೆ. ನಿಷೇಧಿತ ಸ್ಥಳದಲ್ಲಿ ಅನಾವಶ್ಯಕವಾಗಿ ೫ ಜನರಿಗಿಂತ ಹೆಚ್ಚು ಜನರು ಗುಂಪುಗೂಡುವುದು, ಕಲ್ಲು, ದೊಣ್ಣೆ ಮತ್ತು ಆಯುಧಗಳನ್ನು ಹೊಂದಿರುವುದು ಹಿಡಿದುಕೊಂಡು ಓಡಾಡುವುದು, ಪ್ರತಿಭಟನೆ ನಡೆಸುವುದು, ಸಭೆ ನಡೆಸುವುದನ್ನು ನಿರ್ಬಂಧಿಸಲಾಗಿದೆ.