*ಗೋಣಿಕೊಪ್ಪಲು, ಏ. ೭: ತರಗತಿ ನಡೆಯದೇ ಇದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ಪಾವತಿಸುವಂತೆ ಪೋಷಕರಿಗೆ ಕಿರುಕುಳ ನೀಡುತ್ತಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸರ್ವ ಸದಸ್ಯರು ಒತ್ತಾಯಿಸಿದರು.

ಪೊನ್ನಂಪೇಟೆ ತಾ.ಪಂ. ಕಚೇರಿ ಸಾಮರ್ಥ್ಯಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು.

ಕೊರೊನಾ ಹಿನ್ನೆಲೆ ಬಹಳಷ್ಟು ಜನರ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಇಂತಹ ವ್ಯವಸ್ಥೆಯಲ್ಲಿ ಶಿಕ್ಷಣ ಸಂಸ್ಥೆ ಪೋಷಕರನ್ನು ಸುಲಿಗೆ ಮಾಡಲು ಹೊರಟಿರುವುದು ವಿಪರ್ಯಾಸ ಎಂದು ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಸದಸ್ಯ ಪಲ್ವಿನ್‌ಪೂಣಚ್ಚ, ಬಿ.ಎಂ. ಗಣೇಶ್ ಸೇರಿದಂತೆ ಹಲವು ಸದಸ್ಯರು ದ್ವನಿಗೂಡಿಸಿ ತಕ್ಷಣವೇ ಈ ವ್ಯವಸ್ಥೆಯ ಬಗ್ಗೆ ಶಿಸ್ತು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಅವರಿಗೆ ಸೂಚಿಸಿದರು.

ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿಳಗಿ ಅವರು ಬಹಳಷ್ಟು ಪೋಷಕರು ಇಲಾಖೆಗೆ ದೂರು ಸಲ್ಲಿಸಿದ್ದಾರೆ. ಉಪ ನಿರ್ದೇಶಕರ ಗಮನಕ್ಕೆ ತಂದು ಜಿಲ್ಲಾಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಮನವಿ ನೀಡಲಾಗುವುದು ಎಂದು ತಿಳಿಸಿದರು.

ಆನೆ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆಯಿಂದ ಸೋಲಾರ್ ಬೇಲಿ ಅಳವಡಿಕೆಗೆ ಶೇ. ೫೦ ರಷ್ಟು ಸಬ್ಸಿಡಿ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಅರ್ಜಿ ಸಲ್ಲಿಸಿದರು ಫಲಾನುಭವಿಗಳಿಗೆ ಸಬ್ಸಿಡಿ ದೊರಕುತ್ತಿಲ್ಲ. ದಕ್ಷಿಣ ಕೊಡಗಿನಲ್ಲಿ ಆನೆ ಉಪಟಳ ಹೆಚ್ಚಾಗಿದೆ.

ಈ ಬಗ್ಗೆ ಇಲಾಖೆ ಸರಕಾರದ ಗಮನ ಸೆಳೆದು ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿಕೊಡುವಲ್ಲಿ ಇಲಾಖೆ ವಿಫಲತೆ ಸಾಧಿಸಿದೆ ಎಂದು ಸದಸ್ಯ ಕುಟ್ಟಂಡ ಅಜಿತ್ ಕರುಂಬಯ್ಯ ಆರೋಪಿಸಿದರು. ಅರಣ್ಯ ವ್ಯಾಪ್ತಿಯಲ್ಲಿರುವ ಹಾಡಿ ನಿವಾಸಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿಕೊಡಲು ಇಲಾಖೆ ಅರಣ್ಯ ಕಾಯಿದೆಯ ನೆಪ ಹೇಳಿ ಹಿಂದೇಟು ಹಾಕುತ್ತಿದೆ. ತಿತಿಮತಿ ಬೊಂಬುಕಾಡು ಹಾಡಿಯಲ್ಲಿ ಅರಣ್ಯ ಕಾಯಿದೆಯ ಅಡ್ಡಿಯಿಲ್ಲದೇ ಪ್ರಾರ್ಥನಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದೆ. ಪ್ರತಿ ಭಾನುವಾರ ಇಲ್ಲಿ ಪ್ರಾರ್ಥನೆ ನಡೆಯು ತ್ತಿದ್ದು, ಹೊರಭಾಗದ ಹಾಡಿ ಗಳಿಂದಲೂ ಮತಾಂತರಗೊAಡವರು ಬಂದು ಪ್ರಾರ್ಥನೆ ಮಾಡುತ್ತಾರೆ. ಇಂತಹ ಚಟುವಟಿಕೆಗೆ ನಿರ್ಬಂಧ ಹೇರದೆ ಇರುವುದು ಅಧಿಕಾರಿಗಳ ಕಾರ್ಯದಕ್ಷತೆಯನ್ನು ಪ್ರಶ್ನಿಸಬೇಕಾಗಿದೆ ಎಂದು ಸಭೆಯ ಗಮನ ಸೆಳೆದರು.

ಕೋವಿಡ್ ಲಸಿಕೆ ಪಡೆದು ಕೊಳ್ಳುವುದರಿಂದ ಮದ್ಯಸೇವೆನೆಗೆ ಸಮಸ್ಯೆ ಉಂಟಾಗುತ್ತದೆ ಎಂಬ ನೆಪವೊಡ್ಡಿ ಲಸಿಕೆ ಪಡೆದುಕೊಳ್ಳಲು ಪುರುಷರು ಹಿಂದೆ ಬೀಳುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸತ್ಯವಾಗಿದ್ದು, ಲಸಿಕೆ ಪಡೆದ ನಂತರ ಮದ್ಯಸೇವನೆ ಮಾಡುವುದು ಅಪಾಯಕಾರಿ ಬೆಳೆವಣಿಗೆಯಾ ಎಂದು ಸಭೆಯಲ್ಲಿ ಸದಸ್ಯರು ಆರೋಗ್ಯ ಇಲಾಖೆಯ ಅಧಿಕಾರಿ ಡಾ. ಯತಿರಾಜ್ ಅವರನ್ನು ಪ್ರಶ್ನಿಸಿದರು. ಲಸಿಕೆ ಪಡೆದ ನಂತರ ಕೆಲದಿನ ಮದ್ಯಸೇವನೆ ಮಾಡಬಾರದು ಎಂದು ಎಲ್ಲಿಯೂ ಪ್ರಸ್ತಾಪವಾಗಿಲ್ಲ. ಆದರೆ ನಮ್ಮ ಆರೋಗ್ಯದ ದೃಷ್ಠಿಯಿಂದ ಲಸಿಕೆ ಪಡೆದ ೨೪ ಗಂಟೆಗಳವರೆಗೆ ಮದ್ಯಸೇವನೆ ಮಾಡದೇ ಇರುವುದು ಉತ್ತಮ ಎಂದು ಸಭೆಗೆ ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಮಾಹಿತಿ ನೀಡಿದರು. ಉಪಾಧ್ಯಕ್ಷ ನೆಲ್ಲೀರಚಲನ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಕೊಣಿಯಂಡ ಅಪ್ಪಣ್ಣ, ಸದಸ್ಯರು ಗಳಾದ ಜಯಪೂವಯ್ಯ, ಚೆನ್ನಮ್ಮ, ಮೂಕಳೇರ ಆಶಾ, ಕುಲ್ಲಚೆಟ್ಟಿ ಕಾವೇರಮ್ಮ, ಪ್ರಕಾಶ್, ರಾಜು, ಸೀತಮ್ಮ, ಸರೋಜ, ಸುಮ, ಶೋಭ ಉಪಸ್ಥಿತರಿದ್ದರು.

- ಎನ್.ಎನ್. ದಿನೇಶ್