ಮಡಿಕೇರಿ, ಏ. ೭: ಕೋವಿಡ್ ಸಂಕಷ್ಟದ ಹಿನ್ನೆಲೆ ಬೋಧನಾ ಶುಲ್ಕ ಪಾವತಿಸುವ ಸಂದರ್ಭ ಶೇ. ೩೦ ರಷ್ಟು ರಿಯಾಯಿತಿ ನೀಡುವಂತೆ ಸರ್ಕಾರ ಆದೇಶ ಮಾಡಿದ್ದರೂ ಇದನ್ನು ಮೀರಿ ಖಾಸಗಿ ಶಾಲೆಗಳು ಸಂಪೂರ್ಣ ಶುಲ್ಕ ಪಾವತಿಗೆ ಒತ್ತಡ ಹೇರುತ್ತಿವೆ ಎಂದು ಆರೋಪಿಸಿರುವ ಕೊಡಗು ರಕ್ಷಣಾ ವೇದಿಕೆ, ಸಂಬAಧಿಸಿದ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ಸಲ್ಲಿಸಿದೆ.

ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಅಚ್ಚಾಂಡಿರ ಪವನ್ ಪೆಮ್ಮಯ್ಯ ಹಾಗೂ ಪ್ರಮುಖರು ನಗರದಲ್ಲಿರುವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪತ್ರಾಂಕಿತ ಸಹಾಯಕರಾದ ವಿನೋದ ಅವರ ಮೂಲಕ ಮೇಲಧಿಕಾರಿಗಳಿಗೆ ದೂರು ನೀಡಿದರು.

ಸರ್ಕಾರದ ಆದೇಶವನ್ನು ಗಾಳಿಗೆ ತೂರುತ್ತಿರುವ ಶಾಲೆಗಳು ಪೋಷಕರು ನೀಡಲು ಬಾಕಿ ಇರುವ ಶುಲ್ಕವನ್ನು ಪಾವತಿಸುವಂತೆ ಒತ್ತಡ ಹೇರುತ್ತಿವೆ. ಅಲ್ಲದೆ ಶಾಲಾ ಆಡಳಿತ ಮಂಡಳಿ ಸಂಪೂರ್ಣ ಶುಲ್ಕ ಪಾವತಿಗೆ ಪೋಷಕರಿಗೆ ಪತ್ರ ಬರೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಪವನ್ ಪೆಮ್ಮಯ್ಯ, ಶಾಲೆಗಳ ಪತ್ರವನ್ನು ದೂರಿನೊಂದಿಗೆ ಸಲ್ಲಿಸಿದರು.

ಸರ್ಕಾರ ಸ್ಪಷ್ಟ ಆದೇಶ ಮಾಡಿ ಸುತ್ತೋಲೆ ಕಳುಹಿಸಿದ್ದರೂ ನಮಗೆ ಯಾವುದೇ ಆದೇಶ ಬಂದಿಲ್ಲವೆAದು ಕೆಲವು ಶಾಲೆಗಳು ಹೇಳಿಕೆ ನೀಡುತ್ತಿವೆ. ಆದ್ದರಿಂದ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಆಡಳಿತ ಮಂಡಳಿಯ ಸಭೆ ಕರೆದು ಸರ್ಕಾರ ಜಾರಿಗೆ ತಂದಿರುವ ನಿಯಮವನ್ನು ಮನವರಿಕೆ ಮಾಡಿಕೊಡಬೇಕು ಮತ್ತು ಅಧಿಕ ಶುಲ್ಕ ಪಡೆದಿರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಪೋಷಕರುಗಳು ನೀಡಿರುವ ದೂರನ್ನು ಕೂಡ ಪರಿಗಣಿಸಬೇಕೆಂದು ಪವನ್ ಪೆಮ್ಮಯ್ಯ ಹೇಳಿದರು. ರಕ್ಷಣಾ ವೇದಿಕೆಯ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಕರ್ಕೇರ, ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ, ಖಜಾಂಚಿ ಉಮೇಶ್ ಗೌಡ, ನಿರ್ದೇಶಕ ರವಿ ಪಾಪು ಮತ್ತಿತರರು ಮನವಿ ನೀಡುವ ಸಂದರ್ಭ ಹಾಜರಿದ್ದರು.