ಕೂಡಿಗೆ, ಏ. ೭: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತರಿಗೆ ಅನುಕೂಲ ವಾಗುವಂತೆ ಈ ವ್ಯಾಪ್ತಿಗೆ ಒಳಪಡುವ ಸರ್ವೆ ನಂಬರ್ ೮೪/೧ರಲ್ಲಿ ಮಳಿಗೆ ಮಂಟಿ ಎಂಬ ಪ್ರದೇಶದಲ್ಲಿ ಮೂರು ಎಕರೆಗಳಷ್ಟು ಜಾಗವನ್ನು ಕಂದಾಯ ಇಲಾಖೆಯ ವತಿಯಿಂದ ಸರ್ವೆ ನಡೆಸಿ ಕಾದಿರಿಸಲಾಗಿದೆ.

ಕಳೆದ ಹತ್ತು ವರ್ಷಗಳಿಂದಲೂ ನಿವೇಶನ ರಹಿತರಿಗೆ ನಿವೇಶನ ನಿರ್ಮಾಣಕ್ಕೆ ಜಾಗವಿಲ್ಲದೆ ಸರಕಾರದಿಂದ ಮಂಜೂರು ಆದ ಮನೆಗಳನ್ನು ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೂರಾರು ನಿವೇಶನ ರಹಿತರು ವರ್ಷದ ಎರಡೂ ಬಾರಿ ನಡೆಯುವ ಗ್ರಾಮಸಭೆಯಲ್ಲಿ ಅರ್ಜಿಗಳನ್ನು ಸಲ್ಲಿಸಿ ಫಲಾನುಭವಿಗಳಾಗಿ ಆಯ್ಕೆಯಾದರೂ ಜಾಗವಿಲ್ಲದೆ ಮನೆಗಳಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡ ಈಗಿನ ಆಡಳಿತ ಮಂಡಳಿಯವರು ಪ್ರಥಮ ಮಾಸಿಕ ಸಭೆಯಲ್ಲಿ ನಿವೇಶನ ರಹಿತರಿಗೆ ನಿವೇಶನವನ್ನು ನೀಡುವ ತೀರ್ಮಾನ ತೆಗೆದುಕೊಂಡು ಪೈಸಾರಿ ಜಾಗದಲ್ಲಿ ಮೂರು ಎಕರೆಗಳಷ್ಟು ಜಾಗವನ್ನು ಗುರುತು ಮಾಡಲಾಗಿ ಅರ್ಹ ಫಲಾನುಭವಿಗಳಿಗೆ ಆಧ್ಯತಾ ಪಟ್ಟಿಯ ಅನುಗುಣವಾಗಿ ಜಾಗ ನೀಡುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಚ್.ಎಸ್. ಮಂಜುನಾಥ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಸರ್ವ ಸದಸ್ಯರ ಒಪ್ಪಿಗೆಯಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒತ್ತುವರಿ ಆಗಿರುವ ಕೆರೆಗಳನ್ನು ತೆರವುಗೊಳಿಸಲು ಈಗಾಗಲೇ ಆಯಾ ಗ್ರಾಮಗಳ ಕೆರೆಗಳು ಇರುವ ಸ್ಥಳಕ್ಕೆ ಗ್ರಾ.ಪಂ. ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ರಾಕೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

-ಕೆ.ಕೆ. ನಾಗರಾಜಶೆಟ್ಟಿ