ಸಿದ್ದಾಪುರ, ಏ. ೮: ಕಾಡಾನೆಗಳು ದಾಳಿ ನಡೆಸಿ ಕೃಷಿಗೆ ಬಳಸುವ ವಿದ್ಯುತ್ ಉಪಕರಣ ಗಳನ್ನು ಧ್ವಂಸಗೊಳಿಸಿ ರುವ ಘಟನೆ ತ್ಯಾಗತ್ತೂರು ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ತ್ಯಾಗತ್ತೂರ್ ನಿವಾಸಿ, ಮುಂಡ್ರುಮನೆ ಅಚ್ಚಯ್ಯ, ಸುದೀಶ್ ಎಂಬವರಿಗೆ ಸೇರಿದ ಕೃಷಿಗೆ ಬಳಸುವ ವಿದ್ಯುತ್ ಉಪಕರಣಗಳನ್ನು ಕಾಡಾನೆಗಳು ದಾಳಿ ನಡೆಸಿ ತುಳಿದು ಧ್ವಂಸಗೊಳಿಸಿವೆ.

ಒAದು ತಿಂಗಳ ಹಿಂದೆ ಇವರಿಗೆ ಸೇರಿದ ವಿದ್ಯುತ್ ಮೀಟರ್ ಹಾಗೂ ಉಪಕರಣಗಳನ್ನು ಕಾಡಾನೆಗಳು ತುಳಿದು ಹಾನಿಗೊಳಿಸಿತ್ತು. ಇದಾದ ನಂತರ ಇದೀಗ ಕಳೆದ ಎರಡು ದಿನಗಳ ಹಿಂದೆಯಷ್ಟೇ ಹೊಸ ವಿದ್ಯುತ್ ಉಪಕರಣಗಳನ್ನು ತಂದು ಕೃಷಿಗೆ ನೀರು ಹಾಯಿಸಲು ಅಳವಡಿಸಲಾಗಿತ್ತು. ಆದರೆ ಕಾಡಾನೆಗಳು ಮತ್ತೆ ದಾಳಿ ನಡೆಸಿ ಧ್ವಂಸಗೊಳಿಸಿದ್ದು, ಈ ಬಗ್ಗೆ ಮುಂಡ್ರುಮನೆ ಸುದೀಶ್ ಅರಣ್ಯ ಇಲಾಖಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಮೀನುಕೊಲ್ಲಿ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾಲ್ನೂರು - ತ್ಯಾಗತ್ತೂರು ಭಾಗದಲ್ಲಿ ಕಾಡಾನೆ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರೈಲು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆದರೂ ಕೂಡ ಬದಲೀ ಜಾಗದ ಮುಖಾಂತರ ಕಾಡಾನೆಗಳು ಗ್ರಾಮಕ್ಕೆ ನುಗ್ಗಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಮರಿಯಾನೆಗಳು ಸೇರಿ ೮ ಕ್ಕೂ ಅಧಿಕ ಕಾಡಾನೆಗಳು ಈ ಭಾಗದ ಕಾಫಿ ತೋಟಗಳಲ್ಲಿ ಸುತ್ತಾಡುತ್ತವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಶಾಶ್ವತ ಯೋಜನೆ ರೂಪಿಸಬೇಕೆಂದು ಒತ್ತಾಯಿಸಿದ್ದಾರೆ.