ಸೋಮವಾರಪೇಟೆ, ಏ.೮: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ತಾ.೧೦ ಹಾಗೂ ೧೧ರಂದು ಸಮೀಪದ ಅಬ್ಬೂರುಕಟ್ಟೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ ತಿಳಿಸಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಸೋಸಿಯೇಷನ್ ಮತ್ತು ಅಬ್ಬೂರುಕಟ್ಟೆಯ ಸಂತ ಲಾರೆನ್ಸ್ ದೇವಾಲಯದ ಆಶ್ರಯದಲ್ಲಿ ಕ್ರೀಡಾಕೂಟ ನಡೆಯಲಿದ್ದು, ತಾ.೧೦ ರಂದು ಪೂರ್ವಾಹ್ನ ೧೧ ಗಂಟೆಗೆ ಶಾಸಕ ಅಪ್ಪಚ್ಚು ರಂಜನ್ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮೈಸೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಕೆ.ಎಂ. ವಿಲಿಯಂ ಅವರು ಆಶೀರ್ವಚನ ನೀಡಲಿದ್ದು, ಕೊಡಗು ವಲಯದ ಶ್ರೇಷ್ಠಗುರು ಮದುಲೈ ಮುತ್ತು ಅವರು ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಲಿದ್ದಾರೆ. ಇದರೊಂದಿಗೆ ವಿವಿಧ ಧರ್ಮಕೇಂದ್ರದ ಗುರುಗಳು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿಯಿತ್ತರು.
(ಮೊದಲ ಪುಟದಿಂದ) ತಾ.೧೧ರಂದು ಸಂಜೆ ೪.೩೦ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಜಯವೀರಮಾತೆ ದೇವಾಲಯದ ಧರ್ಮಗುರು ರಾಯಪ್ಪ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಂ ವಾಸ್ ವಹಿಸಲಿದ್ದಾರೆ ಎಂದರು.
ಕ್ಯಾಥೋಲಿಕ್ ಸಮುದಾಯ ಬಾಂಧವರಿಗೆ ಕ್ರಿಕೆಟ್, ಮಹಿಳೆಯರಿಗೆ ಥ್ರೋಬಾಲ್, ಪುರುಷ ಹಾಗೂ ಮಹಿಳೆಯರ ಪ್ರತ್ಯೇಕ ವಿಭಾಗದಲ್ಲಿ ಹಗ್ಗಜಗ್ಗಾಟ ಹಾಗೂ ಮಕ್ಕಳಿಗೆ ಲಗೋರಿ ಕ್ರೀಡಾಕೂಟ ನಡೆಯಲಿದೆ. ಕ್ರಿಕೆಟ್ ಪಂದ್ಯಾಟದಲ್ಲಿ ೨೪ ತಂಡಗಳು ಭಾಗವಹಿಸಲಿದ್ದು, ಪ್ರಥಮ ಬಹುಮಾನವಾಗಿ ೨೫ ಸಾವಿರ ನಗದು, ದ್ವಿತೀಯ ೧೫ ಸಾವಿರ, ತೃತೀಯ ೧೦ ಸಾವಿರ ನಗದಿನೊಂದಿಗೆ ಆಕರ್ಷಕ ಟ್ರೋಫಿ, ಇದರೊಂದಿಗೆ ಹಗ್ಗಜಗ್ಗಾಟ, ಥ್ರೋಬಾಲ್, ಲಗೋರಿ ವಿಜೇತರಿಗೂ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.
ಸಮಾರೋಪ ಸಮಾರಂಭದಲ್ಲಿ ಕ್ಯಾಥೋಲಿಕ್ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳು, ಸಾಧಕರನ್ನು ಸನ್ಮಾನಿಸಲಾಗುವುದು. ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಕೊಡಗಿನಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ಬಹುಮಾನ, ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಎಸ್.ಎಂ. ಡಿಸಿಲ್ವಾ ಹೇಳಿದರು.
ಇದರೊಂದಿಗೆ ಸರ್ಕಾರಿ ಸೇವೆ ವಿಭಾಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪೆರಿಗ್ರಿನ್ ಎಸ್.ಮಚ್ಚಾಡೋ, ಮಾಜಿ ಸೈನಿಕ ಥೋಮಸ್ ವಾಸ್, ಪ್ರಗತಿಪರ ಕೃಷಿಕ ಜೆರೋಮ್ ಡಿಸೋಜ, ವೈದ್ಯರಾದ ಶರ್ಮಿಳಾ ಫೆರ್ನಾಂಡೀಸ್, ಪತ್ರಿಕಾ ರಂಗದ ಸೇವೆಗಾಗಿ ಎಂ.ಬಿ. ವಿನ್ಸೆಂಟ್, ಸಮಾಜ ಸೇವೆ ವಿಭಾಗದಲ್ಲಿ ಮೈಕಲ್ ವೇಗಾಸ್, ರೈಮಂಡ್ ಡಿಸೋಜ, ಫ್ರಾನ್ಸಿಸ್ ಡಿಸೋಜ, ಸಿನಿಮಾ ಕ್ಷೇತ್ರದಿಂದ ಶಿನು ಜಾರ್ಜ್ ಅವರುಗಳನ್ನು ಸನ್ಮಾನಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಕ್ಯಾಥೋಲಿಕ್ ಅಸೋಸಿಯೇಷನ್ ಸ್ಥಾಪಕಾಧ್ಯಕ್ಷ ವಿ.ಎ. ಲಾರೆನ್ಸ್, ಉಪಾಧ್ಯಕ್ಷ ಜೋಕಿಂ ವಾಸ್, ಕ್ರೀಡಾ ಸಂಚಾಲಕ ವಿನ್ಸಿ ಡಿಸೋಜ, ನಿರ್ದೇಶಕ ಮರ್ವಿನ್ ಫರ್ನಾಂಡೀಸ್ ಅವರುಗಳು ಉಪಸ್ಥಿತರಿದ್ದರು.