ಕುಶಾಲನಗರ, ಏ. ೬: ವೈದ್ಯರು ರೋಗದ ವಿರುದ್ಧ ಹೋರಾಡಿ ರೋಗಿಯನ್ನು ಗುಣಪಡಿಸುವ ಮನಸ್ಥಿತಿ ಹೊಂದಬೇಕು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹೇಳಿದರು. ಕುಶಾಲನಗರದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನ ಘಟಕಗಳಿಗೆ ಚಾಲನೆ ಹಾಗೂ ಸರಕಾರಿ ಆಯುಷ್ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರೋಗಿಗಳಿಗೆ ಉತ್ತಮ ಸೇವೆ ನೀಡಲು ಪಣತೊಡಬೇಕು. ತಾಲೂಕು ಕೇಂದ್ರವಾಗಿ ರಚನೆಗೊಂಡ ಕುಶಾಲನಗರದ ಕೇಂದ್ರದಲ್ಲಿ ಸಾರ್ವಜನಿಕರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಯೋಜನೆ ರೂಪಿಸಲಾಗಿದೆ. ದಾನಿಗಳು ಈ ಸಂಬAಧ ಸಹಕರಿಸಲು ಅವಕಾಶವಿದ್ದು, ಆ ಮೂಲಕ ಉತ್ತಮ ಗುಣಮಟ್ಟದ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದರು.
ಆರೋಗ್ಯ ಕೇಂದ್ರದಲ್ಲಿ ತುರ್ತು ಅಪಘಾತ ನಿಗಾ ಘಟಕ, ರಕ್ತ ಪರೀಕ್ಷಾ ಕೇಂದ್ರಗಳಿಗೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು. ಆಸ್ಪತ್ರೆಯ ತುರ್ತು ಚಿಕಿತ್ಸಾ ಕೇಂದ್ರದ ಕೊಠಡಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲು ಸಹಾಯ ಹಸ್ತ ನೀಡಿದ ಕುಶಾಲನಗರದ ದಾನಿಗಳಾದ ಎಸ್.ಕೆ. ಸತೀಶ್, ವಿ.ಡಿ. ಪುಂಡರೀಕಾಕ್ಷ, ಎಂ.ವಿ. ನಾರಾಯಣ, ಪಿ.ಪಿ. ಸತ್ಯನಾರಾಯಣ ಮತ್ತು ಸ್ಥಳೀಯ ಜನಪ್ರತಿನಿಧಿಗಳನ್ನು ಈ ಸಂದರ್ಭ ಸನ್ಮಾನಿಸಿ, ಗೌರವಿಸಲಾಯಿತು.
ಸುಮಾರು ರೂ. ೬೦ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಸರಕಾರಿ ಆಯುಷ್ ಆಸ್ಪತ್ರೆ ಲೋಕಾರ್ಪಣೆ ಗೊಳಿಸಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ರಂಜನ್, ನೂತನ ಕಟ್ಟಡದಲ್ಲಿ ಕೊಠಡಿಗಳು ಇಕ್ಕಟ್ಟಾಗಿದ್ದು, ಕೂಡಲೇ ಸರಿಪಡಿಸಲು ಸೂಚಿಸಲಾಗಿದೆ ಎಂದರು. ಕಟ್ಟಡ ಬಹುತೇಕ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಬಗ್ಗೆ ಅಧಿಕಾರಿಗಳೊಂದಿಗೆ ಶಾಸಕರು ಚರ್ಚಿಸಿದರು.
ಈ ಸಂದರ್ಭ ಆಯುಷ್ ವಿಭಾಗದ ವೈದ್ಯರುಗಳಾದ ಡಾ. ಶ್ರೀನಿವಾಸ್, ಡಾ. ಸ್ಮಿತಾ, ಡಾ. ಶೈಲಜಾ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಜೈವರ್ಧನ್, ಸದಸ್ಯರು, ಜಿ.ಪಂ. ಸದಸ್ಯರಾದ ಕೆ.ಪಿ. ಚಂದ್ರಕಲಾ, ಮಂಜುಳ ಮತ್ತಿತರರು ಇದ್ದರು.