ಸಿದ್ದಾಪುರ, ಏ. ೬: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕ ವೃದ್ಧೆ ಮೃತಪಟ್ಟಿರುವ ಘಟನೆ ಬಾಡಗಬಾಣಂಗಾಲ ಗ್ರಾಮದ ಬಿ.ಬಿ.ಟಿ.ಸಿ. ಸಂಸ್ಥೆಗೆ ಸೇರಿದ ತೂಪನಕೊಲ್ಲಿ ಕಾಫಿ ತೋಟದಲ್ಲಿ ತಾ. ೫ರ ಮಧ್ಯರಾತ್ರಿ ನಡೆದಿದೆ. ತೂಪನಕೊಲ್ಲಿ ಕಾಫಿ ತೋಟದಲ್ಲಿ ತನ್ನ ಸೊಸೆಯೊಂದಿಗೆ ವಾಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಲಕ್ಷಿö್ಮ (೮೦) ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ದುರ್ಧೈವಿ.
ಮೃತೆ ಲಕ್ಷಿö್ಮ ತನ್ನ ಮಗ ಮೃತಪಟ್ಟ ನಂತರ ಸೊಸೆ ಕಲ್ಯಾಣಿಯೊಂದಿಗೆ ತೂಪನಕೊಲ್ಲಿ ಕಾಫಿ ತೋಟದ ಲೈನ್‌ಮನೆಯಲ್ಲಿ ವಾಸ ಮಾಡಿಕೊಂಡಿದ್ದರು. ಅಂದಾಜು ರಾತ್ರಿ ೧೧ ಗಂಟೆಯ ಸಮಯಕ್ಕೆ ಮನೆಯ ಮುಂಭಾಗದಲ್ಲಿ ಮೂತ್ರ ವಿಸರ್ಜಿಸಲು ಬಂದ ಸಂದರ್ಭದಲ್ಲಿ ಕಾಫಿ ತೋಟದೊಳಗಿದ್ದ ಕಾಡಾನೆಯೊಂದು ಏಕಾಏಕಿ ಲಕ್ಷಿö್ಮ ಮೇಲೆ ದಾಳಿ ನಡೆಸಿ ಸೊಂಡಿಲಿನಿAದ ಎತ್ತಿ ಬಿಸಾಡಿದ ನಂತರ ಕಾಲಿನಿಂದ ಎದೆಯ ಭಾಗಕ್ಕೆ ತುಳಿದಿದೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಕಾಡಾನೆ ದಾಳಿ ನಡೆಸಿದ ನಂತರ ಸ್ಥಳದಲ್ಲೇ ಘೀಳಿಡುವ ಶಬ್ಧವನ್ನು ಕೇಳಿದ ಅಕ್ಕಪಕ್ಕದ ನಿವಾಸಿಗಳು ಮನೆಯ ಹೊರಗೆ ಬಂದು ನೋಡುವಷ್ಟರಲ್ಲಿ ಲಕ್ಷಿö್ಮ ಕಾಫಿ ತೋಟದ ಒಳಗೆ ನರಳಾಡುತ್ತಿರುವ ಶಬ್ಧ ಕೇಳಿ ಬಂದಿತ್ತು ಎನ್ನಲಾಗಿದೆ. ಕೂಡಲೇ ಚಿಂತಾಜನಕ ಸ್ಥಿತಿಯಲ್ಲಿದ್ದ ಲಕ್ಷಿö್ಮಯನ್ನು ಸ್ಥಳೀಯ ನಿವಾಸಿಗಳು ರಾತ್ರಿ ವಾಹನವೊಂದರಲ್ಲಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದರು. ಆದರೆ ಗಂಭೀರ ಸ್ವರೂಪದಿಂದ ಗಾಯಗೊಂಡಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ೩.೩೦ಕ್ಕೆ ಮೃತಪಟ್ಟಿದ್ದಾರೆ.
ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಬಳಿಕ ಮೃತದೇಹವನ್ನು ಕುಟುಂಬ ವರ್ಗಕ್ಕೆ ಹಸ್ತಾಂತರಿಸಲಾಯಿತು. ಸ್ಥಳಕ್ಕೆ ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮೋಹನ್ ರಾಜ್, ತಿತಿಮತಿ ವಲಯಾರಣ್ಯಾಧಿಕಾರಿ ಅಶೋಕ್ ಹಾಗೂ ಉಪವಲಯಾರಣ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರ: ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಲಕ್ಷಿö್ಮÃ ಕುಟುಂಬಕ್ಕೆ ಅರಣ್ಯ ಇಲಾಖೆಯ ವತಿಯಿಂದ ತುರ್ತು ಪರಿಹಾರವಾಗಿ ರೂ ೨ ಲಕ್ಷದ ಚೆಕ್ಕನ್ನು ಮೃತರ ಕುಟುಂಬಕ್ಕೆ ವಲಯಾರಣ್ಯಾಧಿಕಾರಿ ಅಶೋಕ್ ಹಾಗೂ ಉಪವಲಯಾರಣ್ಯಾಧಿಕಾರಿ ಶ್ರೀನಿವಾಸ್ ನೀಡಿದರು.
೩ ಕಾರ್ಮಿಕರ ಸಾವು!: ಸಿದ್ದಾಪುರ ಸಮೀಪದಲ್ಲಿ ಕಾಡಾನೆ ದಾಳಿಗೆ ಸಿಲುಕಿ ಸಿದ್ದಾಪುರದ ಬಿಬಿಟಿಸಿ ಕಂಪೆನಿಗೆ ಸೇರಿದ ಬೀಟಿಕಾಡು ಕಾಫಿ ತೋಟದಲ್ಲಿ ಕಾರ್ಮಿಕ ಯುವಕನೋರ್ವನು ಕಾಫಿ ಕಣದಲ್ಲಿ ಕೆಲಸ ಮಾಡುತ್ತಿರುವಾಗ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದನು. ನಂತರ ಕಳೆದ ಎರಡು ವಾರಗಳ ಹಿಂದೆಯಷ್ಟೇ ಬಾಡಗಬಾಣಂಗಾಲ ಗ್ರಾಮದ ಕಾರ್ಮಿಕ ಸುಧಾಕರ ಎಂಬವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ಇದೀಗ ವೃದ್ಧೆ ಲಕ್ಷಿö್ಮ ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಒಂದು ತಿಂಗಳಿನಲ್ಲಿ ೩ ಮಂದಿ ಕಾರ್ಮಿಕರು ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕಾರ್ಮಿಕರು ಆತಂಕಕ್ಕೆ ಸಿಲುಕಿಕೊಂಡಿದ್ದಾರೆ. ಅಲ್ಲದೇ ಕೆಲಸಕ್ಕೆ ತೆರಳಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾರ್ಮಿಕರ ಆಕ್ರೋಶ: ಸಿದ್ದಾಪುರ ವ್ಯಾಪ್ತಿಯ ಸುತ್ತಮುತ್ತಲ ಖಾಸಗಿ ಕಾಫಿ ತೋಟಗಳಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಕಾಫಿ ತೋಟದ ಒಳಗೆ ದಾಂಧಲೆ ನಡೆಸುತ್ತಿದೆ. ಕಾರ್ಮಿಕರು ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಹಾಗೂ ಅರಣ್ಯ ಇಲಾಖಾ ಅಧಿಕಾರಿಗಳು ಕಾಡಾನೆ ಹಾವಳಿಗಳನ್ನು ತಡೆಗಟ್ಟಿ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಕಾರ್ಮಿಕರು ಒತ್ತಾಯಿಸಿದ್ದಾರೆ. ಕಾಡಾನೆ ಹಾವಳಿಯಿಂದಾಗಿ ಸಂಜೆ ಸಮಯದಲ್ಲಿ ಪಟ್ಟಣಕ್ಕೆ ಹೋಗಿ ಮನೆಗೆ ಹಿಂತಿರುಗಿ ಬರಲು ಸಮಸ್ಯೆ ಎದುರಾಗಿದ್ದು, ಭಯದ ವಾತಾವರಣ
(ಮೊದಲ ಪುಟದಿಂದ) ನಿರ್ಮಾಣವಾಗಿದೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ. ಲಕ್ಷಿö್ಮರವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಹಿನ್ನೆಲೆಯಲ್ಲಿ ಬಾಡಗಬಾಣಂಗಾಲ ವ್ಯಾಪ್ತಿಯ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಸಂತಾಪ ಸೂಚಿಸಿದರು.
ಕಾಡಾನೆ ಕಾರ್ಯಾಚರಣೆ: ಬಾಡಗಬಾಣಂಗಾಲ ವ್ಯಾಪ್ತಿಯ ತೂಪನಕೊಲ್ಲಿ, ಬಜೆಕೊಲ್ಲಿ, ಬಿಬಿಟಿಸಿ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಆರ್.ಆರ್,ಟಿ ತಂಡದ ಸಿಬ್ಬಂದಿಗಳು ಸೇರಿ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಅಟ್ಟಿದರು. ಆದರೆ ಕಾಡಾನೆಗಳು ರಾತ್ರಿ ಸಮಯದಲ್ಲಿ ಹಿಂತಿರುಗಿ ಕಾಫಿ ತೋಟಗಳಿಗೆ ಲಗ್ಗೆಯಿಡುತ್ತಿದ್ದು, ಇದರಿಂದಾಗಿ ಅರಣ್ಯ ಇಲಾಖಾ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ವರದಿ: ವಾಸು ಎ.ಎನ್.